ಬೆಂಗಳೂರು: ವಸತಿ ಫಲಾನುಭವಿಗಳಿಗೆ ಸಕಾಲದಲ್ಲಿ ಸಾಲ ನೀಡುವಂತೆ ಬ್ಯಾಂಕ್ನವರಿಗೆ ಸೂಚನೆ ನೀಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಸಿಎಂ ನೇತೃತ್ವದಲ್ಲಿ ಪಿಎಂ ಸ್ವನಿಧಿ ಮತ್ತು ಪಿಎಂ ಆವಾಸ್ ಯೋಜನೆ ಹಾಗೂ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ವಿ.ಸೋಮಣ್ಣ, 2023ರೊಳಗೆ ಯಾರಿಗೆ ಸೂರಿಲ್ಲ ಅವರಿಗೆ ಸೂರು ಕಲ್ಪಿಸಲಾಗುತ್ತದೆ. ಇಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಿದ್ದೇವೆ. ಇದೊಂದು ಐತಿಹಾಸಿಕ ತೀರ್ಮಾನ. 3.40 ಲಕ್ಷ ಮನೆಗಳನ್ನು ಕಟ್ಟಲು ತೀರ್ಮಾನ ಮಾಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಇದಕ್ಕೆ ಗ್ರಾಂಟ್ ಸಿಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಾಯಧನ ನೀಡುತ್ತಿದ್ದು, ಉಳಿಕೆ ಹಣವನ್ನು ಬ್ಯಾಂಕ್ನಿಂದ ಪಡೆಯಬೇಕು. ಆದರೆ ಬ್ಯಾಂಕ್ಗಳು ಹಣವನ್ನು ಸರಿಯಾಗಿ ನೀಡುತ್ತಿರಲಿಲ್ಲ. ದಾಖಲೆ ಕೇಳಿ ಫಲಾನುಭವಿಗಳನ್ನು ಅಲೆದಾಡಿಸುತ್ತಿದ್ದರು. ಹಾಗಾಗಿ ಬ್ಯಾಂಕ್ನವರನ್ನು ಕರೆದು ಸಭೆ ನಡೆಸಿದ್ದೇವೆ. ಮೂರು ತಿಂಗಳಲ್ಲಿ ಬ್ಯಾಂಕ್ನವರು ಕಂತಿನ ಸಾಲವನ್ನು ವಿಲೇವಾರಿ ಮಾಡಬೇಕು ಎಂದು ಸೂಚಿಸಿದ್ದು, ಮತ್ತೆ ಸಭೆ ನಡೆಸುತ್ತೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಸಂಬಂಧ ಫಲಾನುಭವಿಗಳಿಗೆ 12 ಲಕ್ಷ ರೂ. ಸಾಲ ಕೊಡಲು ನಿರ್ಧರಿಸಲಾಗಿದೆ. ಮನೆ ಕಟ್ಟಿಕೊಳ್ಳಲು ಪರಿಶಿಷ್ಟ ಜಾತಿ, ಪಂಗಡಕ್ಕೆ 3.5 ಲಕ್ಷ ರೂ. ಹಣ ಸರ್ಕಾರ ನೀಡಲಿದೆ. ಬೇರೆ ವರ್ಗದವರಿಗೆ 1.5 ಲಕ್ಷ ರೂ. ಹಣವನ್ನು ಸರ್ಕಾರ ಕೊಡುತ್ತಿದೆ. ಬಡ ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಹಣ ನೀಡುವಂತೆ ಪ್ರಧಾನಿ ಸೂಚಿಸಿದ್ದಾರೆ. ಹೀಗಾಗಿ ಬಡವರ ಪರ ಯೋಜನೆ ತರುತ್ತಿದ್ದೇವೆ ಎಂದು ತಿಳಿಸಿದರು.
ಸರ್ಕಾರ ಆರ್ಥಿಕ ಕೊರತೆ ಎದುರಿಸುತ್ತಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಖಜಾನೆಯಲ್ಲಿ ಹಣ ಇದೆಯಾ ಅನ್ನೋದು ಮುಖ್ಯವಲ್ಲ, ಇವು ಬಡವರ ಯೋಜನೆಗಳಾಗಿವೆ. ಎಲ್ಲದಕ್ಕೂ ಸರ್ಕಾರದ ಬಳಿ ಹಣವಿದೆ ಎಂದು ಸ್ಪಷ್ಟಪಡಿಸಿದರು.