ಬೆಂಗಳೂರು: ಕೊರೊನಾ ಎರಡನೇ ಅಲೆ ಕಟ್ಟಿ ಹಾಕುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿ ಆದೇಶಿಸಿತ್ತು. ಬಳಿಕ ಚಿತ್ರರಂಗದವರ ತೀವ್ರ ಒತ್ತಡಕ್ಕೆ ಮಣಿದು ಇದೀಗ ಅದನ್ನು ಏಪ್ರಿಲ್ 7ರವರೆಗೆ ವಿಸ್ತರಿಸಿದೆ. ಈ ನಿಟ್ಟಿನಲ್ಲಿ ನಿರ್ಮಾಪಕ ಕೆ.ಮಂಜು ಇಂದು ಆರೋಗ್ಯ ಸಚಿವ ಸುಧಾಕರ್ ನಿವಾಸಕ್ಕೆ ಭೇಟಿ ನೀಡಿ, ಚಿತ್ರಮಂದಿರಗಳಿಗೆ ಶೇ.50ರಷ್ಟು ಸೀಮಿತ ಮಾಡದಂತೆ ಮತ್ತೊಮ್ಮೆ ಮನವಿ ಸಲ್ಲಿಸಿದರು.
ಆರೋಗ್ಯ ಸಚಿವರ ಭೇಟಿ ಬಳಿಕ ಮಾತಾನಾಡಿದ ನಿರ್ಮಾಪಕ, ಕೋವಿಡ್ ಕಾರಣಕ್ಕೆ ಜನರು ಚಿತ್ರಮಂದಿರಕ್ಕೆ ಬರುವುದೇ ಕಡಿಮೆ. ಸಿನಿಮಾ ಬಿಡುಗಡೆಯಾದ ಮೊದಲ ವಾರ ಶೇ. 70ರಷ್ಟು ಹಾಗೂ ನಂತರದ ವಾರದಲ್ಲಿ 40-50ರಷ್ಟು ಪ್ರೇಕ್ಷಕರು ಬರುತ್ತಾರೆ. ಇಂತಹ ಸಂದರ್ಭದಲ್ಲಿ ಇನ್ನಷ್ಟು ಸೀಮಿತ ಮಾಡಿಬಿಟ್ಟರೆ ಜನರು ಬರಲು ಭಯ ಬೀಳ್ತಾರೆ. ಎಲ್ಲ ಚಿತ್ರಮಂದಿರಗಳಲ್ಲಿಯೂ ಕೋವಿಡ್ ನಿಯಮ ಪಾಲನೆ ಮಾಡಲಾಗುತ್ತಿದೆ. ಹೀಗಾಗಿ, 50ರಷ್ಟು ಸೀಮಿತ ಮಾಡದೇ ಪೂರ್ಣ ಪ್ರಮಾಣದಲ್ಲಿ ಬಿಡುವಂತೆ ಮನವಿ ಮಾಡಲಾಗಿದೆ. ಸಿಎಂ ಜೊತೆಗೆ ಮಾತುಕತೆ ನಡೆಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಚಿತ್ರರಂಗ ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದು, ಸರ್ಕಾರ ನಿರ್ಭಂದ ಮಾಡಿದರೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತೆ ಎಂದರು.