ಕರ್ನಾಟಕ

karnataka

ETV Bharat / city

ಕೋವಿಡ್ ನಿಯಮ ಉಲ್ಲಂಘನೆ: ದಂಡ ಪಾವತಿಸಿರುವ ಗಣ್ಯರಿಗೆ ಮತ್ತೆ ಸಂಕಷ್ಟ

ಚುನಾವಣಾ ಸಮಾವೇಶ ಸೇರಿದಂತೆ ಹಲವು ಪ್ರಕರಣಗಳಲ್ಲಿ ಗಣ್ಯರು ಹಾಗೂ ರಾಜಕಾರಣಿಗಳು ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿ ಮಾಸ್ಕ್​ ಧರಿಸದೆ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವ ಬಗ್ಗೆ ಕೋರ್ಟ್ ಮತ್ತೆ ಗರಂ ಆಗಿದೆ.

highcourt
ಹೈಕೋರ್ಟ್

By

Published : Nov 12, 2020, 7:35 PM IST

ಬೆಂಗಳೂರು:ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ದಂಡ ಪಾವತಿಸಿರುವ ವ್ಯಕ್ತಿಗಳ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 2020ರ ಸುಗ್ರೀವಾಜ್ಞೆ ನಿಯಮಗಳ ಪ್ರಕಾರ ಕ್ರಮ ಜರುಗಿಸುವ ಕುರಿತು ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಲೆಟ್ಜ್ ಕಿಟ್ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಪ್ರತಿವಾದ ಆಲಿಸಿದ ಪೀಠ, 2020ರ ಏಪ್ರಿಲ್ 22ರಂದು ರಾಜ್ಯ ಸರ್ಕಾರ ಹೊರಡಿಸಿರುವ ಸಾಂಕ್ರಾಮಿಕ ರೋಗಗಳ ತಡೆ ಸುಗ್ರೀವಾಜ್ಞೆ ಪ್ರಕಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ 3 ವರ್ಷದವರೆಗೆ ಜೈಲು ಹಾಗೂ 50 ಸಾವಿರದವರೆಗೆ ದಂಡ ವಿಧಿಸಲು ಅವಕಾಶವಿದೆ.

ಚುನಾವಣಾ ಸಮಾವೇಶ ಸೇರಿದಂತೆ ಹಲವು ಪ್ರಕರಣಗಳಲ್ಲಿ ಗಣ್ಯರು ಹಾಗೂ ರಾಜಕಾರಣಿಗಳು ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಮಾಸ್ಕ್​ ಧರಿಸದೆ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ವ್ಯಾಪಕವಾಗಿ ಕಂಡು ಬಂದಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಗಣ್ಯ ವ್ಯಕ್ತಿಗಳಲ್ಲಿ ಕೆಲವರ ವಿರುದ್ಧ ಮಾತ್ರ ಎನ್​ಸಿಆರ್ ದಾಖಲಿಸಿ, ಸಣ್ಣ ಮೊತ್ತದ ದಂಡವನ್ನು ವಿಧಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಸುಗ್ರೀವಾಜ್ಞೆ ಅಡಿ ಕ್ರಮ ಕೈಗೊಂಡಿಲ್ಲವೇಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಪ್ರಕರಣ ದಾಖಲಿಸುವ ಹಾಗೂ ಕ್ರಮ ಜರುಗಿಸುವ ಕುರಿತು ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಇನ್ನು ರಾಜಕೀಯ ಪಕ್ಷಗಳು, ಸಂಘಗಳ ರ್ಯಾಲಿಗೆ ಪೊಲೀಸರು ಅನುಮತಿ ನೀಡುತ್ತಾರೆ. ಹೀಗಾಗಿ ರ್ಯಾಲಿ ಸಂದರ್ಭದಲ್ಲಿ ನಿಯಮ ಪಾಲಿಸದಿದ್ದರೆ ಪೊಲೀಸರೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ತಾಕೀತು ಮಾಡಿದೆ.

ಮಾರ್ಷಲ್​ಗಳಿಗೆ ಸಂಬಳ ಪಾವತಿಸಿ:

ವಿಚಾರಣೆ ಸಂದರ್ಭದಲ್ಲಿ ಬಿಬಿಎಂಪಿ ಮಾರ್ಷಲ್​ಗಳಿಗೆ ವೇತನ ಪಾವತಿಸದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೀಠ, ಕೂಡಲೇ ಮಾರ್ಷಲ್​ಗಳಿಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾರ್ಷಲ್​ಗಳು ಕೋವಿಡ್ ನಿಯಮಗಳನ್ನು ಜಾರಿ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಹೀಗಾಗಿ ಮಾರ್ಷಲ್​ಗಳಿಗೆ ಆಗಸ್ಟ್​ನಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಶೀಘ್ರವಾಗಿ ಪಾವತಿಸಬೇಕು. ಅಲ್ಲದೆ ಇಂತಹ ಸ್ಥಿತಿ ಮರುಕಳಿಸದಂತೆ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಡಳಿತಾಧಿಕಾರಿಗೆ ನಿರ್ದೇಶಿಸಿ, ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿತು.

ABOUT THE AUTHOR

...view details