ಬೆಂಗಳೂರು : ದೇಶದಲ್ಲಿ ಯುವತಿಯರಿಗೆ ಮದುವೆಗೆ ಕನಿಷ್ಠ ವಯೋಮಿತಿಯನ್ನು 18 ರಿಂದ 21ಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿರುವ ನಿರ್ಧಾರವನ್ನು ಮಹಿಳಾ ಹೋರಾಟಗಾರರು, ತಜ್ಞರು ಸ್ವಾಗತಿಸಿದ್ದಾರೆ.
ಯುವತಿಯರ ಮದುವೆ ವಯಸ್ಸಿನ ಅಂತರ ಹೆಚ್ಚಳ ಕುರಿತು ಮಹಿಳಾಪರ ಹೋರಾಟಗಾರರ ಅನಿಸಿಕೆ ಕನಿಷ್ಠ 21 ವರ್ಷ ಅಥವಾ ಅದರ ನಂತರ ಗರ್ಭ ಧರಿಸುವುದು ಆರೋಗ್ಯಕರ ಬೆಳವಣಿಗೆ ಆಗಲಿದೆ. ಜೊತೆಗೆ ಹೆಣ್ಣು ಮಕ್ಕಳಲ್ಲಿ ಅಪೌಷ್ಟಿಕತೆ ತಗ್ಗಿಸಲೂ ಕೂಡಾ ಸೂಕ್ತ ವಯಸ್ಸಿನಲ್ಲಿ ಮದುವೆ ಆಗುವುದು ಅಗತ್ಯವೆಂದು ಪ್ರಧಾನಿ ಮೋದಿ ಹೇಳಿದ್ದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆರ್. ಮಾತನಾಡಿ, ಕೇಂದ್ರದ ನಿಲುವನ್ನು ಮಹಿಳಾ ಆಯೋಗ ಸ್ವಾಗತಿಸುತ್ತದೆ. ಈಗಿರುವ ನಿಯಮದಂತೆ 18 ವರ್ಷ, ಹದಿಹರೆಯದ ವಯಸ್ಸಿನಲ್ಲಿ ಮದುವೆಯಾದರೆ ಅವರಿಗೆ ಬರುವ ಸಮಸ್ಯೆಯನ್ನು ಎದುರಿಸಲು ಸಾಧ್ಯವಿಲ್ಲ. 21 ವರ್ಷ ಎಂದರೆ ಸದೃಢವಾಗಿರುತ್ತಾರೆ, ಪದವಿ ಓದು ಪೂರ್ಣಗೊಳಿಸಿರುತ್ತಾರೆ, ತನ್ನ ಕೆಲಸದಲ್ಲೂ ಸ್ವಾವಲಂಬಿಯಾಗಿರುತ್ತಾರೆ. ಇದರಿಂದಾಗಿ ಮದುವೆ ನಂತರ ಬರುವ ಎಲ್ಲಾ ಸವಾಲುಗಳನ್ನು ಎದುರಿಸಲು ಶಕ್ತರಾಗಿರುತ್ತಾರೆ ಎಂದರು.
ವಕೀಲರಾದ ಪ್ರಮೀಳಾ ನೇಸರ್ಗಿ ಅವರು ಮಾತನಾಡಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೆಣ್ಣುಮಕ್ಕಳು 21ನೇ ವರ್ಷಕ್ಕೆ ಬೆಳೆದಿರುತ್ತಾರೆ. 18 ವರ್ಷಕ್ಕೆ ಹೆಚ್ಚು ಪ್ರೌಢರಾಗಿರುವುದಿಲ್ಲ. ಆರ್ಟಿಕಲ್ 14 ರ ಪ್ರಕಾರ ಹೆಣ್ಣು-ಗಂಡಿನ ನಡುವೆ ತಾರತಮ್ಯ ಮಾಡುವ ಹಾಗಿಲ್ಲ. ಹೀಗಾಗಿ ಗಂಡುಮಕ್ಕಳಿಗೆ ಮದುವೆಗೆ ಕನಿಷ್ಠ 21 ವರ್ಷ ನಿಗದಿ ಮಾಡಿರುವಾಗ ಹೆಣ್ಣು ಮಕ್ಕಳಿಗೂ ಅದೇ ನಿಯಮ ಇರಬೇಕು ಎಂದರು.
ಸರ್ಕಾರದ ನಿರ್ಧಾರ ತಿರಸ್ಕರಿಸುತ್ತೇವೆ : ಜನವಾದಿ ಮಹಿಳಾ ಸಂಘಟನೆಯ ವಿಮಲಾ ಕೆ.ಎಸ್ ಮಾತನಾಡಿ, ಮೇಲ್ನೋಟಕ್ಕೆ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಅನಿಸಿದ್ರೂ ಕೂಡ ಸರ್ಕಾರ ಮಾತೃ ಮರಣವನ್ನು ತಪ್ಪಿಸಲಿಕ್ಕಾಗಿ ಮದುವೆ ವಯಸ್ಸು ಹೆಚ್ಚಿಸುತ್ತಿದೆ ಎಂದು ಹೇಳುತ್ತಿದೆ. ಜಯಜೇಟ್ಲಿ ನೇತೃತ್ವದ ಕಮಿಟಿಯ ವರದಿಯ ಮೇಲೆ ಈ ನಿರ್ಧಾರವಾಗಿದೆ ಅಂತ ಹೇಳಲಾಗ್ತಿದೆ. ಆದರೆ ಅಪೌಷ್ಟಿಕತೆ ಕಡಿಮೆ ಮಾಡಲು, ಮಾತೃಮರಣ ಕಡಿಮೆ ಮಾಡಲು ಪೌಷ್ಟಿಕ ಆಹಾರದ ಲಭ್ಯತೆಯ ವ್ಯವಸ್ಥೆ, ಹಾಗೂ ಆರೋಗ್ಯ ವ್ಯವಸ್ಥೆ ನೀಡಬೇಕಿದೆ. ಆದರೆ ಮದುವೆಯ ವಯಸ್ಸು ಹೆಚ್ಚಿಸಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಬಾಲ್ಯವಿವಾಹ ನಿಷೇಧದ ಕಾಯ್ದೆ ಇದ್ದರೂ, ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ ನಡೆಯುತ್ತಲೇ ಇದೆ. ಜೊತೆಗೆ ಮತ ಹಾಕಲು 18 ವರ್ಷ ಸಮರ್ಥ ಎಂದಿರುವಾಗ ಮದುವೆಗೂ 18 ವರ್ಷಕ್ಕೆ ಅವಕಾಶ ಇರಬೇಕು ಎಂಬುದನ್ನು ಬಯಸುತ್ತೇನೆ, ಸರ್ಕಾರದ ನಿರ್ಧಾರ ತಿರಸ್ಕರಿಸುತ್ತೇನೆ ಎಂದರು.