ಬೆಂಗಳೂರು:ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಕಂಟ್ರೋಲ್ ಮೀರಿ ಹೋಗುತ್ತಿದ್ದು, ಇದನ್ನ ತಡೆಯಲು ಸರ್ಕಾರ ಇದೀಗ ಹಲವು ಅಸ್ತ್ರಗಳನ್ನ ಸಿದ್ದಪಡಿಸಿದೆ. ಗುಂಪು ಸೇರುವ ಚಟುವಳಿಕೆಗಳಿಗೆ ಬ್ರೇಕ್ ಹಾಕಿದ್ದು, ಕಠಿಣ ಟಫ್ ರೂಲ್ಸ್ ಜಾರಿ ಮಾಡಿದೆ. ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿ ಮಾಡುವುದರ ಜೊತೆಗೆ ಸಾರಿಗೆ ಬಸ್ ಗಳಲ್ಲಿ ಶೇ.50 ರಷ್ಟು ಮಾತ್ರ ಆಸನ ಭರ್ತಿ ಮಾಡಲು ಸೂಚನೆ ನೀಡಿದೆ.
ಈಗಾಗಲೇ ಕೊರೊನಾ ಮೊದಲ ಅಲೆಯಲ್ಲಿ ಲಾಕ್ಡೌನ್ ಮಾಡಿದಾಗ ಹಲವು ಖಾಸಗಿ ಬಸ್ಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದರು. ಬಳಿಕ ಹಂತ ಹಂತವಾಗಿ ಅನ್ಲಾಕ್ ಮಾಡಿದ ಸಂದರ್ಭದಲ್ಲೂ ಶೇಕಡ 50.ರಷ್ಟು ಆಸನಕ್ಕೆ ಅವಕಾಶ ನೀಡಿದಾಗ, ಬಸ್ಗಳ ಓಡಾಟವನ್ನೇ ನಿಲ್ಲಿಸಿ ಬಿಟ್ಟಿದ್ದರು. ಇದೀಗ ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದ್ದು, ಎಲ್ಲ ಸಾರಿಗೆ ಬಸ್ಗಳಲ್ಲಿ ಶೇ. 50 ರಷ್ಟು ಆಸನಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಈ ಆದೇಶಕ್ಕೆ ಖಾಸಗಿ ಬಸ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಶೇ.50 ರಷ್ಟು ಆಸನಗಳಲ್ಲಿ ಕಾರ್ಯಾಚರಣೆ ಮಾಡಿದರೆ ಬಹಳ ನಷ್ಟವಾಗುತ್ತೆ. ಡಿಸೇಲ್ ಬೆಲೆ ಕೂಡ ಗಗನಕ್ಕೇರಿದ್ದು ಇಂತಹ ಸಂದರ್ಭದಲ್ಲಿ ಕಡಿಮೆ ಪ್ರಯಾಣಿಕರನ್ನ ಹೊತ್ತೊಯ್ದರೆ ಯಾವುದೇ ಲಾಭ ಇರೋದಿಲ್ಲ. ಕಳೆದ ವರ್ಷ ಸರ್ಕಾರ ಶೇ. 50 ರಷ್ಟು ಅವಕಾಶ ನೀಡಿದ ಕಾರಣದಿಂದ ಹಲವು ಜಿಲ್ಲೆಗಳಲ್ಲಿ ಬಸ್ ನಿಲ್ಲಿಸಲಾಗಿತ್ತು. ಅಂತಾರೆ ಖಾಸಗಿ ಬಸ್ ಮಾಲೀಕರಾದ ಬಾಲ ಕೃಷ್ಣ.
ಸರ್ಕಾರ ಯಾವುದೇ ಆದೇಶ ಮಾಡುವ ಮುನ್ನ ಯೋಚನೆ ಮಾಡಬೇಕು. ಕೋವಿಡ್ ನಿಯಂತ್ರಣಕ್ಕೆ ಅಂತ ಈ ರೀತಿ ನಿಯಮಗಳನ್ನ ಮಾಡಿದರೆ ಜನರು ಬಸ್ ಇಲ್ಲ ಅಂತ ಆಟೋ, ಟಂಟಂ ಗಾಡಿಗಳ ಮೊರೆ ಹೋಗ್ತಾರೆ. ಆಗ ಒಂದೇ ಆಟೋದಲ್ಲಿ ಹತ್ತಾರು ಜನರನ್ನ ತುಂಬಿಕೊಂಡು ಹೋಗ್ತಾರೆ. ಅನಿರ್ವಾಯವಾಗಿ ಪ್ರಯಾಣಿಕರು ಹೋಗಬೇಕಾಗುತ್ತದೆ. ಇದರಿಂದ ಇನ್ನಷ್ಟು ಸೋಂಕು ಹರಡಲು ದಾರಿ ಮಾಡಿಕೊಟ್ಟಂತೆ ಆಗೋದಿಲ್ವಾ ಅಂತ ಪ್ರಶ್ನೆ ಮಾಡಿದರು.