ಬೆಂಗಳೂರು:ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಬೋಧನಾ ಶುಲ್ಕದಲ್ಲಿ ಶೇ.30ರಷ್ಟು ಕಡಿತ ಮಾಡಿದ್ದ ಸರ್ಕಾರದ ಆದೇಶ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತಂತೆ ಖಾಸಗಿ ಶಾಲೆಗಳು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಇಂದು ಇತ್ಯರ್ಥಪಡಿಸಿರುವ ಹೈಕೋರ್ಟ್, 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶೇ.15 ರಷ್ಟು ಶುಲ್ಕ ರಿಯಾಯಿತಿಗೆ ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ರಾಜ್ಯದ ಖಾಸಗಿ ಶಾಲೆಗಳು ಹಾಗೂ ಸರ್ಕಾರದ ನಡುವಿನ ಬಿಕ್ಕಟ್ಟನ್ನು ಹೈಕೋರ್ಟ್ ಪರಿಹರಿಸಿದೆ. ಸರ್ಕಾರದ ಶುಲ್ಕ ಕಡಿತ ಆದೇಶವನ್ನು ರದ್ದುಪಡಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಸೇರಿ ಹಲವು ಸಂಘಟನೆಗಳು ಹೈಕೋರ್ಟ್ಗೆ ತಕರಾರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿತ್ತು.
ಇಂದು ತೀರ್ಪು ಪ್ರಕಟಿಸಿರುವ ಪೀಠ, 2019-20ನೇ ಸಾಲಿನಲ್ಲಿ ಎಷ್ಟು ಶುಲ್ಕವನ್ನು ಸಂಗ್ರಹ ಮಾಡಲಾಗಿತ್ತೋ ಅದರಲ್ಲಿ ಶೇ.15ರಷ್ಟು ವಿನಾಯ್ತಿ ನೀಡಿದೆ. ಹಾಗೆಯೇ, 2020-21ನೇ ಸಾಲಿನಲ್ಲಿ ಖಾಸಗಿ ಶಾಲೆಗಳು ಶೇ.15ರಷ್ಟು ರಿಯಾಯಿತಿ ನೀಡಿ ಶುಲ್ಕ ಸಂಗ್ರಹಿಸಿಲು ಅವಕಾಶ ನೀಡಿದೆ. 2021ರ ಮೇ 3ರಂದು ಸುಪ್ರೀಂಕೋರ್ಟ್ ಜೋಧ್ ಪುರದ ಇಂಡಿಯನ್ ಸ್ಕೂಲ್ ಮತ್ತು ರಾಜಸ್ಥಾನ ಪ್ರಕರಣದಲ್ಲಿ 2020-21ನೇ ಸಾಲಿಗೆ ಶೇ.15 ರಷ್ಟು ರಿಯಾಯಿತಿ ನೀಡಿ ಉಳಿದ ಶುಲ್ಕವನ್ನು ಸಂಗ್ರಹಿಸಲು ಖಾಸಗಿ ಶಾಲೆಗಳಿಗೆ ಅವಕಾಶ ನೀಡಿತ್ತು. ಹಾಗೆಯೇ, ಶಾಲೆಗಳು ಶುಲ್ಕದ ಕಾರಣಕ್ಕೆ ಮಕ್ಕಳನ್ನು ಆನ್ ಲೈನ್ ತರಗತಿಗಳಿಂದ ನಿರ್ಬಂಧಿಸಬಾರದು ಎಂದು ಸೂಚಿಸಿತ್ತು. ಇದೇ ತೀರ್ಪು ಆಧರಿಸಿ ರಾಜ್ಯ ಹೈಕೋರ್ಟ್ ಕೂಡ ಶುಲ್ಕ ವಿವಾದವನ್ನು ಬಗೆಹರಿಸಿದೆ.