ಬೆಂಗಳೂರು:ಶಾಲಾ ಶುಲ್ಕ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಇಂದು ಖಾಸಗಿ ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಬೀದಿಗಿಳಿದು ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದಾರೆ.
ಶಿಕ್ಷಣ ಇಲಾಖೆ ವಿರುದ್ಧ ತಿರುಗಿಬಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು ಕ್ಯಾಮ್ಸ್ ಸೇರಿದಂತೆ 10ಕ್ಕೂ ಹೆಚ್ಚು ಖಾಸಗಿ ಶಾಲೆಗಳ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಕಾಲ್ನಡಿಗೆಯಲ್ಲಿ ಹೊರಟು, ಫ್ರೀಡಂ ಪಾರ್ಕ್ ತಲುಪಿ ಸಮಾವೇಶ ನಡೆಸಲಿದ್ದಾರೆ. ಬಳಿಕ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ತಮ್ಮ ಬೇಡಿಕೆ ಕುರಿತಾದ ಮನವಿ ಸಲ್ಲಿಸಲಿದ್ದಾರೆ. ಶಾಲೆ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಶಾಲೆ ಸಿಬ್ಬಂದಿ ಸೇರಿ 25 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಇತ್ತ ರಾಜ್ಯಾದ್ಯಂತ ಖಾಸಗಿ ಶಾಲೆಗಳ ಎಲ್ಲ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದರಿಂದ ಇಂದು ಖಾಸಗಿ ಶಾಲಾ ಮಕ್ಕಳಿಗೆ ಪಾಠ - ಪ್ರವಚನ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಶನಿವಾರ ಪೂರ್ಣ ತರಗತಿಯನ್ನ ನಡೆಸಲು ತೀರ್ಮಾನಿಸಿವೆ.
ಪ್ರತಿಭಟನೆಗೆ ಕಾರಣಗಳು:
- ಖಾಸಗಿ ಶಾಲೆಗಳ ಆರ್ಥಿಕ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸದೇ ಅವೈಜ್ಞಾನಿಕವಾಗಿ ಶುಲ್ಕ ಕಡಿತ ಮಾಡಿರುವುದು
- ಹಳೆಯ ಶಾಲೆಗಳಿಗೆ ಹೊಸ ಶಾಲೆಯ ಷರತ್ತು ವಿಧಿಸಿ, ಮಾನ್ಯತೆ ನವೀಕರಣ ಹೆಸರಲ್ಲಿ ಭ್ರಷ್ಟಾಚಾರ
- ಶಾಲೆಗಳಿಗೆ ಕಡ್ಡಾಯ ದಾಖಲಾತಿ, ಹಾಜರಾತಿ, ಕನಿಷ್ಠ ಮೌಲ್ಯ ಮಾಪನಕ್ಕೆ ಒತ್ತು ನೀಡದೇ ಇರುವುದು
- ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 371 (ಜೆ) ಬೇಡಿಕೆಗಳ ಈಡೇರಿಕೆ
- ಪ್ರಾಥಮಿಕ ಶಾಲೆ ಪುನರ್ ಆರಂಭದ ಗೊಂದಲ
- ಆರ್ಟಿಇ ಹಣ ಮರುಪಾವತಿಯಾಗದೆ ಕಿರುಕುಳ
- ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಇಒ ಹಾಗೂ ಡಿಡಿಪಿಐ ಕಚೇರಿಗೆ ನಿಯಂತ್ರಣ ಹಾಕದೆ ಇರುವುದು
ಪ್ರತಿಭಟನೆಯಿಂದ ಟ್ರಾಫಿಕ್ ತಲೆಬಿಸಿ: ಪ್ರತಿಭಟನೆಗೆ ಬೃಹತ್ ಸಂಖ್ಯೆಯಲ್ಲಿ ಖಾಸಗಿ ಶಾಲಾ ಸಿಬ್ಬಂದಿ ಸೇರುತ್ತಿರುವ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು,ವಾಹನ ಸವಾರರು ಹೈರಾಣಾಗಿದ್ದಾರೆ. ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಸ್ಥಳದಲ್ಲಿ 1 ಕೆಎಸ್‌ಆರ್‌ಪಿ ವಾಹನ, 3 ಆ್ಯಂಬುಲೆನ್ಸ್, 400 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.