ಬೆಂಗಳೂರು: ಸೆಂಟ್ರಲ್ ಜೈಲಿನಲ್ಲಿರುವ ಕೈದಿಗಳಿಗೆ ಕಾರ್ಯಾಗಾರವನ್ನು ಆಯೋಜಿಸುವ ಜೈಲಿನ ಅಧಿಕಾರಿಗಳು ನೂತನ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಜೈಲಿನ ಶುಚಿತ್ವಕ್ಕಾಗಿ 15 ದಿನಗಳ ಹಿಂದೆ ಶುರುವಾದ ಫಿನಾಯಿಲ್ ತಯಾರಿಕೆ ಉದ್ದಿಮೆ ಇದೀಗ ರಾಜ್ಯಾದ್ಯಂತ ಬಹುಬೇಡಿಕೆಯ ವಸ್ತುವಾಗಿದೆ.
ವಿವಿಧ ಬಣ್ಣದ, ಸುಹಾಸನೆಯ ಫಿನಾಯಿಲ್ ಉದ್ದಿಮೆಯನ್ನ ಐದು ಮಂದಿ ಕೈದಿಗಳು ಆರಂಭಿಸಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಜೈಲಲ್ಲಿ ಶುಚಿತ್ವಕ್ಕಾಗಿ ಸೀಮಿತ ಸಂಖ್ಯೆಯ ಫಿನಾಯಿಲ್ ತಯಾರಿಸಲು ಮುಂದಾಗಿದ್ದರು. ದಿನ ಕಳೆದಂತೆ ದೊಡ್ಡ ಉದ್ದಿಮೆಯಾಗಿ ಫಿನಾಯಿಲ್ ಬ್ಯುಸಿನಸ್ ಬೆಳೆದಿದೆ.
ಒಂದು ಲೀಟರ್‌ಗೆ 60 ರೂ. ನಂತೆ ಎಲ್ಲಾ ಕಾರಾಗೃಹಗಳಿಗೆ ಇಲ್ಲಿಂದಲೇ ರವಾನೆ ಮಾಡಿದ್ದಾರೆ. ಮಾತ್ರವಲ್ಲದೆ ಸಾರ್ವಜನಿಕರು ಜೈಲಿಗೆ ಬಂದು ಕೈದಿಗಳು ತಯಾರಿಸಿರುವ ಫಿನಾಯಿಲ್ ಖರೀದಿಸುತ್ತಿದ್ದಾರೆ. ಕೈದಿಗಳ ಈ ವಿಭಿನ್ನ ಉದ್ದಿಮೆಗೆ ಜೈಲಾಧಿಕಾರಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಫಿನಾಯಿಲ್ ಅಷ್ಟೇ ಅಲ್ಲದೆ ಕಬ್ಬಿಣದ ಉಪಕರಣಗಳಿಗೂ ಇಲ್ಲಿ ಬೇಡಿಕೆ ಇದೆ.
ಕುರ್ಚಿ, ಟೇಬಲ್, ಬೀರು, ಬಾಕ್ಸ್, ಕಬೋರ್ಡ್‌ಗಳನ್ನು ಮಾಡಲು ಸಜಾಬಂದಿ ಕೈದಿಗಳು ಟೆಂಡರ್ ಪಡೆದಿದ್ದಾರೆ. ಕೋರ್ಟ್, ಕಾಲೇಜು, ಸ್ಟೇಷನ್‌ಗಳಿಂದ ಕಬ್ಭಿಣದ ಯಾವುದೇ ವಸ್ತು ಬೇಕಿದ್ರೂ ಪತ್ರ ನೀಡಲಾಗುತ್ತೆ. ಪ್ರತಿನಿತ್ಯ ಜೈಲಲ್ಲಿ ಡ್ಯೂಟಿ ಸಮಯದಂತೆ ಕೈದಿಗಳು ತಮ್ಮ ಉದ್ದಿಮೆ ಕೆಲಸದಲ್ಲಿ ನಿರತರಾಗುತ್ತಾರೆ. ಕೈದಿಗಳು ತಮ್ಮ ಕೌಶಲ್ಯ, ಕಾರ್ಯಪ್ರವೃತ್ತಿಯಿಂದಾಗಿ ಹಿರಿಯ ಅಧಿಕಾರಿಗಳಿಂದ ಶಹಬ್ಬಾಶ್ ಗಿರಿ ಕೂಡ ಪಡೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಹೋಮ್ ಗಾರ್ಡ್ಸ್‌ಗೆ 18 ಸಾವಿರ ಶರ್ಟ್ ಪ್ಯಾಂಟ್‌ಗಳನ್ನೂ ಕೂಡ ಕೈದಿಗಳು ಹೊಲಿದಿದ್ದಾರೆ. ಜೈಲಿನ ಗಾರ್ಮೆಂಟ್ಸ್‌ನಲ್ಲಿ ತಯಾರಾಗುವ ಬಟ್ಟೆಗಳಿಗೂ ಬೇಡಿಕೆ ಇದ್ದು, ಮಾಸ್ಕ್, ಟವೆಲ್ ಸೇರಿದಂತೆ ಬಟ್ಟೆಗಳ ಹೊಲಿಕೆಗೆ 40 ಹೊಲಿಗೆ ಯಂತ್ರದ ವ್ಯವಸ್ಥೆ ಮಾಡಲಾಗಿದೆ. ಶಿಫ್ಟ್ ಪ್ರಕಾರವಾಗಿ ಕೈದಿಗಳು ಜೈಲಿನಲ್ಲಿ ಕೆಲಸ ಮಾಡುತ್ತಾರೆ. ಕೈದಿಗಳು ತಮ್ಮ ಜೈಲು ವಾಸವನ್ನ ಉಪಯುಕ್ತವಾಗಿ ಕಳೆಯುತ್ತಿರುವುದನ್ನ ಕಂಡು ಜೈಲಾಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿರುವುದಲ್ಲದೇ, ಇದೇ ರೀತಿ ಮುಂದೆ ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸಿದ್ದಾರೆ.