ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕಿನಿಂದಾಗಿ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ಆಗಿದ್ದು ಸುಳ್ಳಲ್ಲ. ಆಟ - ಪಾಠ ಅಂತ ಇದ್ದ ಮಕ್ಕಳು ಮನೆಯಲ್ಲೇ ಲಾಕ್ ಆಗುವಂತಾಯ್ತು. ಕೋವಿಡ್ ತೀವ್ರತೆ ಕ್ರಮೇಣ ಇಳಿಕೆಯಾದ ಬೆನ್ನಲ್ಲೇ ಮೊದಲ ಹಂತವಾಗಿ 8 ರಿಂದ 10ನೇ ತರಗತಿ ಆರಂಭ ಮಾಡಲಾಯ್ತು. ಇದಾದ ಬಳಿಕ 6-7 ನೇ ತರಗತಿ ಶುರುವಾದ ನಂತರ ಮತ್ತೊಂದು ಭಾಗವಾಗಿ ಇಂದು 1-5ನೇ ತರಗತಿಯನ್ನ ಅಕ್ಟೋಬರ್ 25 ರಿಂದ ಆರಂಭಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ.
1-5ನೇ ತರಗತಿ ಆರಂಭ ಕುರಿತು ಸಚಿವರಿಂದ ಮಾಹಿತಿ ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆ ಸಚಿವ ನಾಗೇಶ್, ತಾಂತ್ರಿಕ ಸಲಹಾ ಸಮಿತಿಯ ವರದಿ ಬಳಿಕ ಮುಖ್ಯಮಂತ್ರಿಗಳ ಸಲಹೆ ಮೇರೆಗೆ ಅಕ್ಟೋಬರ್ 25 ರಿಂದ 1-5ನೇ ತರಗತಿ ಆರಂಭ ಮಾಡಲಿದ್ದೇವೆ. ಕೋವಿಡ್ನಿಂದಾಗಿ ಭೌತಿಕ ತರಗತಿ ಆರಂಭಕ್ಕೆ ಬ್ರೇಕ್ ಹಾಕಲಾಗಿತ್ತು. ಒಂದು ವಾರಕ್ಕೂ ಮೊದಲೇ ಪುಟಾಣಿ ಮಕ್ಕಳಿಗೆ ಕೋವಿಡ್ ಮಾರ್ಗಸೂಚಿ ಕುರಿತು ತರಬೇತಿ ನೀಡಲಾಗುತ್ತೆ. 1-5ನೇ ತರಗತಿ ಮಕ್ಕಳಿಗೆ ಅರ್ಧ ದಿನ ಮಾತ್ರ ಪಾಠ-ಪ್ರವಚನ ಇರಲಿದ್ದು, ನವೆಂಬರ್ 1ರ ನಂತರ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭವಾಗಲಿದೆ ಎಂದರು.
ಮಕ್ಕಳಿಗೆ 20 ತಿಂಗಳ ಶಿಕ್ಷಣ ಕೊರತೆ ಉಂಟಾಗಿತ್ತು. ಇದೀಗ ಅವರಿಗೆ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಕಾಲಾವಕಾಶ ಬೇಕು. ಹೀಗಾಗಿ ಮೊದಲ ಒಂದು ವಾರ ಅರ್ಧ ದಿನ ಮಾತ್ರ ಶಾಲೆ ಇರಲಿದೆ ಎಂದು ಶಿಕ್ಷಣ ಸಚಿವರು ಹೇಳಿದರು.
ಪುಟಾಣಿ ಮಕ್ಕಳಿಗಿಲ್ಲ ಬಿಸಿಯೂಟ:ಕೋವಿಡ್ ಹಿನ್ನೆಲೆ ತಾತ್ಕಾಲಿಕವಾಗಿ 1-5 ನೇ ತರಗತಿ ಮಕ್ಕಳಿಗೆ ಬಿಸಿಯೂಟಕ್ಕೆ ಬ್ರೇಕ್ ಹಾಕಲಾಗಿದ್ದು, ಈ ತಿಂಗಳ ಪೂರ್ಣ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ. ಅಕ್ಟೋಬರ್ 21 ರಿಂದ 6ರಿಂದ 10ನೇ ತರಗತಿ ಮಕ್ಕಳಿಗೆ ಮಾತ್ರ ಬಿಸಿಯೂಟ ವಿತರಣೆ ಮಾಡಲಾಗುತ್ತದೆ. ನವೆಂಬರ್ ನಂತರ ಎಲ್ಲ ಮಕ್ಕಳಿಗೂ ಬಿಸಿಯೂಟ ವಿತರಿಸಲಾಗುತ್ತದೆ.
ಯುಕೆಜಿ, ಎಲ್ ಕೆಜಿ ಕ್ಲಾಸ್ ಯಾವಾಗ..? :ರಾಜ್ಯದಲ್ಲಿ 276 ಪೂರ್ವ ಪ್ರಾಥಮಿಕ ಶಾಲೆಗಳಿವೆ. ಇದರ ಆರಂಭದ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯಕ್ಕೆ ಎಲ್ಕೆಜಿ, ಯುಕೆಜಿ ತರಗತಿ ನಡೆಸುವ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.
- ಪ್ರಮುಖ ಗೈಡ್ ಲೈನ್ಸ್
- ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ
- ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ
- ಶೇ.50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ
- ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ಒಪನ್
- ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಸ್ವಚ್ಚತಾ ಕಾರ್ಯ, ಸ್ಯಾನಿಟೈಸರ್ಗೆ ಅವಕಾಶ
- ಮಕ್ಕಳಿಗೆ ಒಂದು ದಿನ ತರಗತಿ ಒಂದು ದಿನ ರಜೆ
- ಪಾಸಿಟಿವಿಟಿ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆ, ತಾಲೂಕು ವಲಯಗಳಲ್ಲಿ ಮಾತ್ರ ಶಾಲೆ ಆರಂಭ
- ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು
- ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ
- ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ತರಗತಿಗೂ ಅವಕಾಶ
- 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು