ಕರ್ನಾಟಕ

karnataka

ETV Bharat / city

ಹೂವಿನ ಕರಗಕ್ಕೆ ಸಕಲ ಸಿದ್ಧತೆ ; ಐತಿಹಾಸಿಕ ಬೆಂಗಳೂರು ಉತ್ಸವಕ್ಕೆ ಮಳೆರಾಯನ ಭೀತಿ..

ಹಸಿ ಕರಗದ ನಂತರ ಇಂದು ಪೊಂಗಲು ಸೇವೆ, ಪುರಾಣ ಕಥನ ನಡೆಯಲಿದೆ. ನಾಳೆ ಮಧ್ಯರಾತ್ರಿ 12 ಗಂಟೆಗೆ ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿ ಹೂವಿನ ಕರಗ ಪೂಜಾರಿ ಜ್ಞಾನೇಂದ್ರ ಹೊರಲಿದ್ದು, ಇಡೀ ರಾಜಬೀದಿಗಳಲ್ಲಿ ಸಂಚರಿಸಲಿದ್ದಾರೆ..

By

Published : Apr 15, 2022, 12:51 PM IST

preperation-for-hoovina-karaga
ಅದ್ಧೂರಿ ಹಸಿ ಕರಗ ನಂತರ ಹೂವಿನ ಕರಗಕ್ಕೆ ಸಕಲ ಸಿದ್ಧತೆ

ಬೆಂಗಳೂರು :ಐತಿಹಾಸಿಕ ಬೆಂಗಳೂರು ಕರಗದ ಪ್ರಮುಖ ಆಕರ್ಷಣೆ ಅಂದರೆ ಹೂವಿನ ಕರಗ. ದ್ರೌಪದಿ ಕರಗ ಅಂತಲೂ ಕರೆಯುವ ಈ ಉತ್ಸವವು ಬೆಂಗಳೂರಿನ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಹಬ್ಬವೂ ಹೌದು. ಚೈತ್ರ ಪೌರ್ಣಿಮೆ ದಿನದಂದು ನಡೆಯುವ ಕರಗ ಉತ್ಸವಕ್ಕೆ ಸಕಲವೂ ಸಜ್ಜಾಗಿವೆ. ಕೋವಿಡ್ ಕಾರಣಕ್ಕೆ ಕಳೆದೆರಡು ವರ್ಷದಿಂದ ಮಂಕಾಗಿದ್ದ ವಿಶ್ವ ಪ್ರಸಿದ್ಧ ಕರಗ ಮಹೋತ್ಸವವನ್ನ ಈ ವರ್ಷ ಬಹಳ ಅದ್ದೂರಿಯಾಗಿ ನಡೆಸಲಾಗುತ್ತಿದೆ.

ಲಕ್ಷಾಂತರ ಜನರು ಕರಗದ ಅದ್ಧೂರಿತನದ ಉತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ನಿನ್ನೆಯಷ್ಟೇ ಹಸಿ ಕರಗ ನಡೆದಿದ್ದು, ಸಾವಿರಾರು ಜನರು ಭಕ್ತಿ ಪರವಶವಾಗಿದ್ದರು. ಕರಗ ಬೆಂಗಳೂರಿನ ವಿಶೇಷ, ವಿಶಿಷ್ಟ ಹಾಗೂ ವಿಭಿನ್ನ ಆಚರಣೆಯಾಗಿದೆ. ತನ್ನದೇ ಆದ ಧಾರ್ಮಿಕ ಹಿನ್ನೆಲೆ, ಪಾವಿತ್ರ್ಯತೆ ಕೂಡ ಹೊಂದಿದೆ. 8 ದಿನಗಳ ಈ ಉತ್ಸವದಲ್ಲಿ ಹೂವಿನ ಕರಗವೇ ಮುಖ್ಯ ಕೇಂದ್ರ ಬಿಂದುವಾಗಿದ್ದು, ಇದಕ್ಕೆ ಈಗಾಗಲೇ ತಯಾರಿಗಳು ನಡೆದಿವೆ.

ಹಸಿ ಕರಗದ ನಂತರ ಇಂದು ಪೊಂಗಲ್​ ಸೇವೆ, ಪುರಾಣ ಕಥನ ನಡೆಯಲಿದ್ದು, ನಾಳೆ ಮಧ್ಯರಾತ್ರಿ 12 ಗಂಟೆಗೆ ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿ ಹೂವಿನ ಕರಗ ಪೂಜಾರಿ ಜ್ಞಾನೇಂದ್ರ ಹೊರಲಿದ್ದು, ಇಡೀ ರಾಜಬೀದಿಗಳಲ್ಲಿ ಸಂಚರಿಸಲಿದ್ದಾರೆ. ನಾಳೆ ಕಬ್ಬನ್‌ಪಾರ್ಕ್‌ನ ಕರಗದ ಕುಂಟೆಯಲ್ಲಿ ಕರಗ ಹೊರುವ ಜ್ಞಾನೇಂದ್ರ ಅವರಿಗೆ ಕೊನೆಯ ಶುದ್ದಿ ಸ್ನಾನ ಮಾಡಿಸಲಾಗುತ್ತದೆ.

ನಂತರ ಅಲ್ಲಿಯೇ ತಿಗಳ ಜನಾಂಗದವರು ಸೇರಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.‌ ಹೊಂಗೆ ಗಿಡವನ್ನು ಬಳಸಿ, ಚಪ್ಪರ ನಿರ್ಮಿಸಿ, ಅಲ್ಲಿ ದ್ರೌಪದಿ ಅವತಾರದ ಪೂಜಾರಿಗೆ ಕೆಲವು ಶಾಸ್ತ್ರಗಳನ್ನ ಮಾಡಲಾಗುತ್ತದೆ. ಜೊತೆಗೆ ಧರ್ಮರಾಯ ದೇವಸ್ಥಾನದಿಂದ ಒಂದು ಕಿ.ಮೀ ಉದ್ದಕ್ಕೂ ಕರ್ಪೂರ ಹಚ್ಚಲಾಗುತ್ತದೆ. ನಾಳೆ ಮಧ್ಯರಾತ್ರಿ ಧರ್ಮರಾಯ ಸ್ವಾಮಿ ದೇವಸ್ಥಾನದ ಗರ್ಭಗುಡಿಯಿಂದ ಕರಗ ಹೊರಟು, ನಗರದ ವಿವಿಧೆಡೆ ಸಂಚರಿಸಲಿದೆ. ಇದಕ್ಕಾಗಿ ಲಕ್ಷಾಂತರ ಭಕ್ತರು ಕಾತುರರಾಗಿದ್ದಾರೆ.

ಬೆಂಗಳೂರು ಕರಗಕ್ಕೂ ಮಳೆರಾಯನ ಕಾಟ :ಇನ್ನು ಕಳೆದ ಎರಡು ದಿನಗಳಿಂದ ಸಂಜೆ ವೇಳೆಗೆ ಮಳೆರಾಯನ ಅಬ್ಬರ ಜೋರಾಗಿದ್ದು, ಮುಂದಿನ ಮೂರು ದಿನಗಳ ಕಾಲ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಭಕ್ತರಿಗೆ ಕೊಂಚ ನಿರಾಶೆ ಆಗಬಹುದು.

ಕರಗದ ಹಿನ್ನೆಲೆ ಏನು? :ದ್ವಾಪರಯುಗದಲ್ಲಿ ರಾಕ್ಷಸರ ಪಡೆಗಳನ್ನು ಸದೆ ಬಡಿಯಲು ದ್ರೌಪದಿ ಜನ್ಮತಾಳಿದ್ದಳು ಅನ್ನುತ್ತದೆ ಇಲ್ಲಿನ ನಂಬಿಕೆ. ಪಾಂಡವರು ಕುರುಕ್ಷೇತ್ರ ಕದನ ಮುಗಿಸಿ, ಯುಗ ಸಮಾಪ್ತಿಯಾಗಿ ಸ್ವರ್ಗಕ್ಕೆ ಹಿಂತಿರುಗುವಾಗ ತಿಮಿರಾಸುರ ಎನ್ನುವ ರಾಕ್ಷಸ ಮಾತ್ರ ಬದುಕುಳಿದಿರುತ್ತಾನೆ. ಆಗ ದ್ರೌಪದಿ ತನ್ನ ಬೆವರಿನಿಂದ ವೀರಕುಮಾರರನ್ನು ಸೃಷ್ಟಿ ಮಾಡಿ ತಿಮಿರಾಸುರನನ್ನು ಸಂಹರಿಸುತ್ತಾಳೆ ಎನ್ನುವುದು ಕಥೆಯ ಸಾರಾಂಶ.

ಪುನಃ ಸ್ವರ್ಗಕ್ಕೆ ಹೊರಡುವಾಗ ವೀರಕುಮಾರರು ಇಲ್ಲೇ ನೆಲೆಸುವಂತೆ ಒತ್ತಾಯ ಮಾಡಿದಾಗ ವರ್ಷಕ್ಕೊಮ್ಮೆ ಚೈತ್ರ ಪೌರ್ಣಮಿ ದಿನದಂದು ಬರುವುದಾಗಿ ದ್ರೌಪದಿ ಮಾತುಕೊಟ್ಟಿದ್ದಾಳಂತೆ. ಹೀಗಾಗಿ, ಈ ದಿನದಂದೆ ವಿಶೇಷ ಪೂಜೆ ಮಾಡಿ ಕತ್ತಿ ಹಿಡಿಯುವ ವೀರಕುಮಾರರು ಅಂದರೆ ತಿಗಳ ಜನಾಂಗದವರು ಜೈಕಾರದೊಂದಿಗೆ ತಾಯಿಯ ದರ್ಶನ ಮಾಡುತ್ತಾರೆ.

ಇದನ್ನೂ ಓದಿ:ಹಸಿ ಕರಗ ಉತ್ಸವಕ್ಕೆ ಸಿಎಂ ಮೆರುಗು: ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ABOUT THE AUTHOR

...view details