ಬೆಂಗಳೂರು:ದೇಶದಲ್ಲಿ ಕೊರೊನಾ ಭೀತಿಗೆ ಹಬ್ಬಗಳು ಕಳೆಗುಂದಿವೆ. ಅದರಂತೆ ವರ್ಷದ ಕೊನೆಗೆ ಬರುವ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಆಚರಿಸಲು ಕ್ರೈಸ್ತ ಬಾಂಧವರು ನಿರ್ಧರಿಸಿದ್ದಾರೆ.
ಪ್ರತಿ ವರ್ಷ ಕ್ರೈಸ್ತರ ವಿಶೇಷ ಹಬ್ಬವಾಗಿರುವ ಕ್ರಿಸ್ಮಸ್ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಸದ್ಯ ಕೋವಿಡ್ ಭೀತಿ ಹಿನ್ನೆಲೆ ಸರಳ ಆಚರಣೆಗೆ ಜನರು ಮುಂದಾಗಿದ್ದಾರೆ.
ಸರಳ ಕ್ರಿಸ್ಮಸ್ ಆಚರಣೆಗೆ ತಯಾರಿ ಅಲ್ಲದೆ ಈ ಬಾರಿ ಅಲಂಕಾರಿಕ ವಸ್ತುಗಳಿಗೂ ಸಹ ಕೊರತೆ ಉಂಟಾಗಿದೆ. ಯಾಕಂದ್ರೆ ವರ್ಷದ ಆರಂಭದಿಂದಲೇ ಕೊರೊನಾ ಸೋಂಕಿನಿಂದ ಲಾಕ್‌ಡೌನ್ ಘೋಷಿಸಲಾಗಿತ್ತು. ಇದರ ನಡುವೆ ಚೀನಾದ ವಸ್ತುಗಳನ್ನು ಬ್ಯಾನ್ ಮಾಡಿದ್ದರಿಂದ ಹೊಸ ಬಗೆಯ ಅಲಂಕಾರಿಕ ವಸ್ತುಗಳು, ಗೊಂಬೆಗಳು ಯಾವುವೂ ಕೂಡ ಮಾರುಕಟ್ಟೆಗೆ ಬಂದಿಲ್ಲ.
ಇನ್ನು ಇದು ಹಬ್ಬಕ್ಕೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಬರುವ ಗ್ರಾಹಕರಿಗೂ ಬೇಸರ ತಂದಿದೆ. ಅಲ್ಲದೆ ಕೊರೊನಾ ಭೀತಿ ಹಿನ್ನೆಲೆ ಹಳೆಯ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ.