ಬೆಂಗಳೂರು:ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರೋ ಹಿನ್ನೆಲೆ ಪರಿಸ್ಥಿತಿ ನಿಭಾಯಿಸುವ ಕುರಿತು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸಭೆ ನಡೆಸಿವೆ.
ಕೊರೊನಾ ಪ್ರಕರಣ ಹೆಚ್ಚಾಗ್ತಿದ್ದಂತೆ ಬಿಬಿಎಂಪಿಯಿಂದ ಹೆಚ್ಚಿನ ತಂಡಗಳ ರಚನೆ ಸಭೆ ಬಳಿಕ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಮಾತನಾಡಿ, ಕೊರೊನಾ ಸೋಂಕಿತರ ಪ್ರಥಮ ಸಂಪರ್ಕದ ಜನರನ್ನ ಹನ್ನೆರಡು ಗಂಟೆಯಲ್ಲಿ ಪತ್ತೆ ಹಚ್ಚಲು ಕ್ರಮ ವಹಿಸಬೇಕು. ಸೆಕೆಂಡರಿ ಕಾಂಟ್ಯಾಕ್ಟ್ ಜನರನ್ನ 24 ಗಂಟೆಯಲ್ಲಿ ಪತ್ತೆ ಹಚ್ಚಿ, ಆ ಸ್ಥಳಗಳನ್ನು ದಿಗ್ಬಂಧನ ಮಾಡಬೇಕು. ಈಗ ಇರುವ ತಂಡಗಳಲ್ಲಿ ಒಂದೇ ತಂಡ ಎರಡ್ಮೂರು ಜವಾಬ್ದಾರಿ ನಿಭಾಯಿಸುತ್ತಿವೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಕಂಡು ಬಂದ್ರೆ ಸ್ಟಾಂಪಿಂಗ್ ಕೆಲಸ, ಪ್ರೈಮರಿ ಕಾಂಟ್ಯಾಕ್ಟ್, ಸೆಂಕೆಂಡರಿ ಕಾಂಟ್ಯಕ್ಟ್ ಜನರನ್ನ ಗುರುತಿಸಲು ಪ್ರತ್ಯೇಕ ತಂಡ ಬೇಕು. ಇದಕ್ಕೆ ತಂಡಗಳನ್ನ ರಚಿಸಿ, ತರಬೇತಿ ನೀಡುವ ಬಗ್ಗೆ ಸಭೆ ನಡೆದಿದೆ. ಸರ್ಕಾರ ನೇಮಿಸಿರುವ ನಾಲ್ಕು ಜನ ಐಎಎಸ್ ಅಧಿಕಾರಿಗಳೂ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಸೂಕ್ತ ತಂಡಗಳನ್ನು ರಚಿಸಿ, ತರಬೇತಿ ನೀಡಲಾಗುವುದು ಎಂದರು.
ಇನ್ನು ಪ್ರಧಾನಿಗಳ ಸೂಚನೆಯಂತೆ ಏಪ್ರಿಲ್ ಕೊನೆಯವರೆಗೂ ಲಾಕ್ಡೌನ್ ಮುಂದುವರಿಯಲಿದೆ. ರಾಜ್ಯ ಸರ್ಕಾರದ ಟಾಸ್ಕ್ ಫೋರ್ಸ್ ನೀಡುವ ಸೂಚನೆಯಂತೆ ಲಾಕ್ಡೌನ್ ಮುಂದುವರಿಯಲಿದೆ. ಹೊಸ ಪ್ರದೇಶಗಳ ಸೀಲ್ಡೌನ್ ಮಾಡುವ ಚಿಂತನೆ ಇಲ್ಲ. ಒಂದೇ ದಿನದಲ್ಲಿ ಹೆಚ್ಚಿನ ಪ್ರಕರಣ ಕಂಡು ಬಂದ್ರೆ ಮಾತ್ರ ಸೀಲ್ಡೌನ್ ಮಾಡಲಾಗುವುದು ಎಂದರು.
ಇನ್ನು ಪ್ರೈಮರಿ ಕಾಂಟ್ಯಾಕ್ಟ್ ಕ್ವಾರಂಟೈನ್ನಲ್ಲಿದ್ದವರು ಮನೆ ಖಾಲಿ ಮಾಡಿ ಹೋದರೆ ಪಾಲಿಕೆಯಿಂದ ಟ್ರೇಸ್ ಮಾಡಲಾಗುವುದು. ಎರಡು ವಾರ್ಡ್ ಸೀಲ್ಡೌನ್ ಮಾಡಿದ ಮೇಲೆ ಜನರು ಉಳಿದ ಪ್ರದೇಶಗಳನ್ನು ಸೀಲ್ಡೌನ್ ಮಾಡಲು ಒತ್ತಡ ಹೇರುತ್ತಿದ್ದಾರೆ. ಅದರ ಅಗತ್ಯ ಇಲ್ಲ. ವಾತಾವರಣ ನೋಡಿಕೊಂಡು ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ ಎಂದರು. ಅಲ್ಲದೇ, ವಿದೇಶದಿಂದ ಬಂದವರಿಗೆ, ಪ್ರೈಮರಿ ಕಾಂಟ್ಯಾಕ್ಟ್ನಲ್ಲಿರುವವರು ಈಗ ಒಟ್ಟು 42 ದಿನಗಳ ಕಾಲ ನಿಗಾದಲ್ಲಿ ಇರಲು ಸೂಚಿಸಲಾಗಿದೆ. ಮೊದಲ ಹದಿನಾಲ್ಕು ದಿನ ಹೋಂ ಕ್ವಾರಂಟೈನ್, ಬಳಿಕ ಹದಿನಾಲ್ಕು ದಿನ ಮಾನಿಟರಿಂಗ್, ನಂತರ ಹದಿನೈದು ದಿನ ಸೆಲ್ಫ್ ರಿಪೋರ್ಟಿಂಗ್ನಲ್ಲಿ ಇರಲು ಸೂಚಿಸಲಾಗಿದೆ ಎಂದರು.