ಬೆಂಗಳೂರು : ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಪೂರಕವಾಗಿದ್ದರೆ ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿನ್ನೆಯೇ ಆದೇಶ ಮಾಡಿದ್ದೇನೆ. ಕೇರಳ ಪೋಲೀಸರೊಂದಿಗೆ ನಮ್ಮ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ. ಕರ್ನಾಟಕದ ಡಿಜಿಪಿ ಕೇರಳ ಡಿಜಿಪಿ ಜೊತೆ ಮಾತುಕತೆ ನಡೆಸಿದ್ದಾರೆ ಎಂದರು.
ಪ್ರವೀಣ್ ಕೇಸ್ ಎನ್ಐಎಗೆ ವಹಿಸಲು ಹಿಂದೆ ಮುಂದೆ ನೋಡಲ್ಲ ಈಗಾಗಲೇ ತನಿಖಾ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಕರೆಸಿ ಅವರ ಜೊತೆ ಮಾತುಕತೆ ನಡೆಸುತ್ತೇನೆ. ಆದಷ್ಟು ಬೇಗ ಕೊಲೆ ಮಾಡಿದವರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ಈ ಹಿಂದೆ ಆದ ಎಲ್ಲಾ ಪ್ರಕರಣಗಳಲ್ಲಿಯೂ ನಾವು ಕೂಡಲೇ ಕ್ರಮ ಕೈಗೊಂಡಿದ್ದೇವೆ. ಮಂಗಳೂರು ಘಟನೆ, ಡಿಜೆ ಹಳ್ಳಿ ಗಲಭೆ, ಶಿವಮೊಗ್ಗ ಘಟನೆ ಬಗ್ಗೆ ನಾವು ಯಾವ ರೀತಿ ಕ್ರಮ ತೆಗೆದುಕೊಂಡಿದ್ದೇವೆಯೋ, ಅದೇ ರೀತಿ ಕೂಡಲೇ ಕ್ರಮಗಳನ್ನು ಈ ಕೇಸ್ ನಲ್ಲಿಯೂ ತೆಗೆದುಕೊಳ್ಳುತ್ತೇವೆ. ಅಷ್ಟು ಮಾತ್ರವಲ್ಲ, ಇದರ ಹಿಂದೆ ಇರುವ ವ್ಯಕ್ತಿಗಳು ಮತ್ತು ಸಂಘಟನೆಗಳು ಯಾರೇ ಇದ್ದರೂ ಅವರನ್ನು ಸದೆಬಡೆಯುವ ಕೆಲಸ ಮಾಡುತ್ತೇವೆ ಎಂದು ಸಿಎಂ ಖಡಕ್ ಸಂದೇಶ ರವಾನಿಸಿದರು.
ಸಮಾಜದಲ್ಲಿ ಹಿಂಸೆ ಮಾಡಿ ಕ್ಷೋಭೆ ತರುವುದು ದುಷ್ಕೃತ್ಯ. ಈ ದುಷ್ಕೃತ್ಯವನ್ನು ಧಮನ ಮಾಡುವವರೆಗೂ ನಾನು ವಿಶ್ರಮಿಸುವುದಿಲ್ಲ, ಹೀಗಾಗಿ ಯಾರೂ ಕೂಡ ಆವೇಶಕ್ಕೆ ಒಳಗಾಗದೆ, ಶಾಂತಿ ಕಾಪಾಡಬೇಕು, ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಡದೆ ತನಿಖೆಗೆ ಎಲ್ಲರೂ ಸಹಕಾರ ನೀಡಬೇಕೆಂದು ಸಿಎಂ ನಾಡಿನ ಜನತೆಯಲ್ಲಿ ಮನವಿ ಮಾಡಿದರು.
ಅರ್ಹವಾಗಿದ್ದರೆ ಎನ್ಐಎಗೆ ಕೇಸ್:ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. ಆದರೆ ಪ್ರಾಥಮಿಕವಾಗಿ ನಾವು ತನಿಖೆ ನಡೆಸಬೇಕು. ರಾಷ್ಟ್ರೀಯ ತನಿಖಾದಳ ಯಾವುದೇ ಪ್ರಕರಣ ಕೈಗೆತ್ತಿಕೊಳ್ಳಬೇಕೆಂದರೆ ಅದಕ್ಕೆ ಕೆಲವೊಂದು ಷರತ್ತುಗಳಿರುತ್ತವೆ. ಅದೆಲ್ಲವನ್ನು ನೋಡಿ, ಈ ಪ್ರಕರಣವನ್ನು ಎನ್ಐಎ ತನಿಖೆಗೆ ಅರ್ಹವಾಗಿದ್ದರೆ ರಾಷ್ಟ್ರೀಯ ತನಿಖಾದಳಕ್ಕೆ ವಹಿಸಲು ನಾವು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ :Praveen Nettaru murder: ಸಿಎಂ ಬೊಮ್ಮಾಯಿಗೆ ತನಿಖೆ ಮಾಹಿತಿ ನೀಡಿದ ಡಿಜಿಪಿ ಸೂದ್