ಕರ್ನಾಟಕ

karnataka

ETV Bharat / city

ಅಪರಾಧ ಪ್ರಕರಣಗಳ ಮಟ್ಟಕ್ಕೆ ಮೇಜರ್ ಕ್ರೈಂ ಮಾನಿಟರಿಂಗ್ ಸೆಲ್: ನೂತನ ಪೊಲೀಸ್​ ಆಯುಕ್ತ

ನಿರ್ಗಮಿತ ಪೊಲೀಸ್ ಆಯುಕ್ತ ಕಮಲ್‌ ಪಂತ್​ರಿಂದ ಅಧಿಕಾರ ಸ್ವೀಕರಿಸಿದ ನೂತನ ಆಯುಕ್ತ ಪ್ರತಾಪ್​ ರೆಡ್ಡಿ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳನ್ನು ಮಟ್ಟಹಾಕಲು ಪ್ರತಿ ವಿಭಾಗಗಳಲ್ಲಿ ಮೇಜರ್​ ಕ್ರೈಂ ಮಾನಿಟರಿಂಗ್​ ಸೆಲ್​ ಆರಂಭಿಸುವುದಾಗಿ ತಿಳಿಸಿದ್ದಾರೆ.

pratap-reddy-take-charge
ಅಧಿಕಾರದ ದಂಡ ಸ್ವೀಕರಿಸಿದ ಪ್ರತಾಪ್​ ರೆಡ್ಡಿ

By

Published : May 17, 2022, 5:51 PM IST

ಬೆಂಗಳೂರು:ರಾಜಧಾನಿಯಲ್ಲಿ ನಡೆಯುವ ಗಂಭೀರ ಸ್ವರೂಪದ ಅಪರಾಧ ಪ್ರಕರಣ ನಿರ್ವಹಣೆ ಹಾಗೂ ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಪ್ರತಿಯೊಂದು ವಿಭಾಗಗಳಲ್ಲಿ ಮೇಜರ್ ಕ್ರೈಂ ಮಾನಿಟರಿಂಗ್ ಸೆಲ್ ತೆರೆಯುವುದಾಗಿ ನೂತನ‌ ಪೊಲೀಸ್ ಆಯುಕ್ತ ಸಿ.ಹೆಚ್. ಪ್ರತಾಪ್ ರೆಡ್ಡಿ ಘೋಷಿಸಿದ್ದಾರೆ. ನಿರ್ಗಮಿತ ಪೊಲೀಸ್ ಆಯುಕ್ತ ಕಮಲ್‌ ಪಂತ್​ರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು.

ನಗರದಲ್ಲಿ ದೊಡ್ಡಮಟ್ಟದ ಅಪರಾಧಗಳು ನಡೆದಾಗ ಕೂಡಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದು ಅಗತ್ಯವಾಗಿದೆ. ಆರೋಪಿ ಬಂಧನದಿಂದ ಹಿಡಿದು ಚಾರ್ಜ್ ಶೀಟ್ ಹಂತದವರೆಗೂ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕು. ಈ‌‌ ನಿಟ್ಟಿನಲ್ಲಿ‌ ನಗರದ ಪ್ರತಿಯೊಂದು ವಲಯದಲ್ಲಿ ಮೇಜರ್ ಕ್ರೈಂ ಮಾನಿಟರಿಂಗ್ ಸೆಲ್ ತೆರೆಯಲಾಗುತ್ತದೆ. ಈ‌ ಮೂಲಕ ಆರೋಪಿಗಳಿಗೆ ಶೀಘ್ರ ಶಿಕ್ಷೆ ಪ್ರಕಟವಾಗುವಹಾಗೆ ನೋಡಿಕೊಳ್ಳಬಹುದಾಗಿದೆ ಎಂದರು‌.

ನೂತನ ಪೊಲೀಸ್​ ಆಯುಕ್ತ ಪ್ರತಾಪ್ ರೆಡ್ಡಿ

ಆಪ್ತಮಿತ್ರನಿಂದ ಅಧಿಕಾರ:ನನ್ನ‌ ಆಪ್ತಮಿತ್ರ ಕಮಲ್‌ ಪಂತ್​ರಿಂದ ಅಧಿಕಾರ ಸ್ವೀಕರಿಸಿರುವುದು‌ ಖುಷಿಯಾಗಿದೆ. ಅವರು ಮಾಡಿದ ಒಳ್ಳೆಯ ಕೆಲಸವನ್ನು ಮುಂದುವರೆಸುತ್ತೇನೆ. ಬೆಂಗಳೂರು ನಗರ ಗ್ಲೋಬಲ್‌ ಸಿಟಿಯಾಗಿದೆ‌. ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅಂತಾರಾಷ್ಟ್ರೀಯ ‌ಮಟ್ಟದಲ್ಲಿ ಸುದ್ದಿಯಾಗಲಿದೆ. ಈ‌ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿ ಹಾಗೂ ವಿಶ್ವಾಸಾರ್ಹ ರೀತಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಿ, ಕೆಲಸ ಮಾಡುತ್ತೇನೆ. ರೌಡಿಗಳ ನಿಗ್ರಹ, ಡ್ರಗ್ಸ್ ಚಟುವಟಿಕೆಗೆ ಇನ್ನಷ್ಟು ಕಡಿವಾಣ ಹಾಕುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾನೂನು‌‌ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ‌‌ ಆಯಾ ಠಾಣಾ ವ್ಯಾಪ್ತಿಯ ಇನ್​ಸ್ಪೆಕ್ಟರ್​ಗಳು ಸರಿಯಾಗಿ ಕೆಲಸ ಮಾಡಬೇಕು. ಒಂದು ವಿಫಲರಾದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಹಿಳಾ ದೌರ್ಜನ್ಯ ವಿರುದ್ಧ ಶೀಘ್ರ ಕ್ರಮ:ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಹಾಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ನಡೆದಾಗ ಕೂಡಲೇ ತ್ವರಿತಗತಿಯಲ್ಲಿ ತನಿಖೆ ನಡೆಸಿ ಬಂಧಿತರನ್ನ ಫಾಸ್ಟ್ ಟ್ರ್ಯಾಕ್ ಕೋರ್ಟ್​ಗೆ ಹಾಜರುಪಡಿಸುವಂತೆ ಕ್ರಮ‌ ಕೈಗೊಳ್ಳುತ್ತೇವೆ. ಸಂಚಾರಿ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತೇನೆ ಎಂದರು.

ಸೈಬರ್ ಕ್ರೈಂ ‌ನಿಯಂತ್ರಣಕ್ಕೆ ಒತ್ತು ಕೊಡುತ್ತೇನೆ. ಕೊರೊನಾ ಬಳಿಕ ವರ್ಕ್ ಫ್ರಂ ಹೋಮ್ ವ್ಯವಸ್ಥೆಯಿಂದ ಜನ ಹೊರ ಬಂದಿದ್ದಾರೆ‌.‌ ಹೀಗಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ನಿಲ್ಲಿಸಲಾಗಿರುವ ಟೋಯಿಂಗ್ ವ್ಯವಸ್ಥೆ ಮತ್ತೆ ಬರಬೇಕಿದೆ‌‌‌ ಎಂದು ತಿಳಿಸಿದರು.

ಓದಿ:ಶಾಲಾ ವಿದ್ಯಾರ್ಥಿಗಳಿಗೆ ರೈಫಲ್ ತರಬೇತಿ, ತಾಲಿಬಾನ್ ಸಂಸ್ಕೃತಿ ಬಿಂಬಿಸುತ್ತದೆ: ಯು ಟಿ ಖಾದರ್

ABOUT THE AUTHOR

...view details