ಬೆಂಗಳೂರು : ಡೀಮ್ಡ್ ಫಾರೆಸ್ಟ್ ಅನ್ನೋ ಕಾರಣಕ್ಕೆ ಭೂ ಮಂಜೂರಾತಿಯನ್ನು ತಡೆಹಿಡಿಯಲಾಗುತ್ತಿದೆ. ಇದು ಮುಗ್ಧರಿಗೆ ಮಾಡುತ್ತಿರುವ ಅನ್ಯಾಯ. ಇದಕ್ಕೆ ನ್ಯಾಯ ಕೊಡಿ ಎಂದು ಕಾಂಗ್ರೆಸ್ ಸದಸ್ಯ ಪ್ರತಾಪ ಚಂದ್ರ ಶೆಟ್ಟಿ ಸದನದ ಬಾವಿಗಿಳಿದ ಧರಣಿ ನಡೆಸಿದರು. ಅರ್ಧಗಂಟೆ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಸಭಾಪತಿಗಳು ಭರವಸೆ ನೀಡಿದ್ದರಿಂದ ಪ್ರತಾಪ್ ಚಂದ್ರ ಶೆಟ್ಟಿ ಧರಣಿ ಕೈಬಿಟ್ಟ ಘಟನೆ ನಡೆಯಿತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರಶೆಟ್ಟಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಕುರಿತು ಪ್ರಸ್ತಾಪಿಸಿದರು. ಉಡುಪಿ ಜಿಲ್ಲೆಯಲ್ಲಿ 94ಸಿ ಅಡಿಯಲ್ಲಿ ಭೂ ಮಂಜೂರಾತಿ ಆಗಿರುತ್ತದೆ. ಆದರೆ, ಈಗ ಡೀಮ್ಡ್ ಫಾರೆಸ್ಟ್ ಅನ್ನೋ ಕಾರಣಕ್ಕೆ ಭೂ ಮಂಜೂರಾತಿ ತಡೆಹಿಡಿಯಲಾಗುತ್ತಿದೆ. ಇದು ಮುಗ್ಧರಿಗೆ ಮಾಡುತ್ತಿರುವ ಅನ್ಯಾಯ, ಇದಕ್ಕೆ ನ್ಯಾಯ ಕೊಡಿ ಎಂದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್, ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಾಪಸ್ ತೆಗೆದುಕೊಳ್ಳುವ ಕುರಿತು ಕ್ರಮ ವಹಿಸಲಾಗುತ್ತದೆ ಎಂದರು. ಆದರೆ, ಇದಕ್ಕೊಪ್ಪದ ಪ್ರತಾಪ್ ಚಂದ್ರ ಶೆಟ್ಟಿ, ನನಗೆ ನಿಖರವಾದ ಉತ್ತರ ಬೇಕು ಎಂದು ಒತ್ತಾಯಿಸಿದರು. ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಸರ್ಕಾರ ಸೂಕ್ತ ಉತ್ತರ ನೀಡದಿದ್ದರೆ ಸದನದಲ್ಲೇ ಮಲಗುವುದಾಗಿ ಹೇಳಿದರು.
ಶಾಲು ಹೊದ್ದುಕೊಂಡು ಬಂದಿದ್ದೇನೆ, ಇಲ್ಲೇ ಮಲಗುತ್ತೇನೆ ಎಂದ ಪ್ರತಾಪಚಂದ್ರ ಶೆಟ್ಟಿ ಹೇಳಿಕೆಗೆ, ಓಹ್, ಮಲಗೋಕೆ ಅಂತಲೇ ಶಾಲು ಹಾಕಿಕೊಂಡು ಬಂದಿದ್ದೀರಾ? ಎಂದ ಸಭಾಪತಿ ಹೊರಟ್ಟಿ ಹಾಸ್ಯ ಚಟಾಕಿ ಹಾರಿಸಿದರು.
ಸರ್ಕಾರದ ನಿಖರ ಉತ್ತರಕ್ಕೆ ಶೆಟ್ಟರು ಪಟ್ಟು ಹಿಡಿದರು. ಈ ವೇಳೆ ಪ್ರತಾಪ ಚಂದ್ರ ಶೆಟ್ಟಿ ಹಾಗೂ ಆರ್.ಅಶೋಕ್, ಸಿಸಿ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆ ದಿನ ಅಂತಾ ಮಾತನಾಡುತ್ತಿದ್ದೀರಾ? ಮಾತಾಡಿ ಎಂದ ಅಶೋಕ್ ಹೇಳಿಕೆಗೆ ಆಕ್ರೋಶಗೊಂಡ ಪ್ರತಾಪಚಂದ್ರ ಶೆಟ್ಟಿ, ನಿಮ್ಮ ಭಿಕ್ಷೆ ಬೇಕಿಲ್ಲ. ನಂಗೇ ಯಾರ ಭಿಕ್ಷೆಯೂ ಬೇಕಿಲ್ಲ ಎಂದರು. ಇದಕ್ಕೆ ಹೌದು, ನೀವೇನು ಅಂತಾ ಗೊತ್ತು ಬಿಡಿ ಎಂದು ಆಕ್ರೋಶಗೊಂಡ ಸಚಿವ ಸಿಸಿ ಪಾಟೀಲ್ ಕಾಲೆಳೆದರು. ಈ ವೇಳೆ ನಾನು ಪ್ರತಿಭಟನೆ ಮಾಡುತ್ತೇನೆ ಎಂದು ಸದನದ ಬಾವಿಗಿಳಿದ ಪ್ರತಾಪಚಂದ್ರ ಶೆಟ್ಟಿ ಧರಣಿ ನಡೆಸಿದರು.
ಈ ವೇಳೆ ಸಚಿವ ಸುನಿಲ್ ಕುಮಾರ್ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ನಮ್ಮ ಸರ್ಕಾರದ ಕೂಸಲ್ಲ, ಕಾಂಗ್ರೆಸ್ ಕೂಸು ಅಂದ ಸುನೀಲ್ ಮಾತಿಗೆ ಕೆರಳಿದ ಕಾಂಗ್ರೆಸ್ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಕಿಡಿಕಾರಿದರು. ಇಬ್ಬರ ನಡುವೆ ವಾಕ್ಸಮರ ನಡೆಯಿತು, ಸಭಾಪತಿ ಮಾತಿಗೂ ಬಗ್ಗದ ನಾಯಕರು ವಾಗ್ವಾದ ನಡೆಸಿದರು.
ಡೀಮ್ಡ್ ಫಾರೆಸ್ಟ್ನಲ್ಲಿ ಯಾರ್ಯಾರು ಗಣಿಗಾರಿಕೆ ಮಾಡ್ತಿದ್ದಾರೆ ಅನ್ನೋದನ್ನ ನೋಡಿ, ಬಡವರಿಗಾದರೆ ಈ ರೀತಿ ತೊಂದರೆ ಮಾಡುತ್ತೀರಾ? ಅಂತಾ ಧ್ವನಿಗೂಡಿಸಿದ ಬಿಕೆ ಹರಿಪ್ರಸಾದ್, ಸರ್ಕಾರ ನಿರ್ಧಾರ ಖಂಡಿಸಿ ಪ್ರತಾಪ್ ಚಂದ್ರ ಶೆಟ್ಟರ ನೆರವಿಗೆ ಧಾವಿಸಿದರು. ಈ ವೇಳೆ ಸಭಾಪತಿ ನಾಳೆ ಅರ್ಧ ಗಂಟೆ ಚರ್ಚಿಸಲು ಅವಕಾಶ ಕೊಡುತ್ತೇನೆ ವಾಪಸ್ ಬನ್ನಿ ಅಂತಾ ಪ್ರತಾಪಚಂದ್ರ ಶೆಟ್ಟರಿಗೆ ಸಭಾಪತಿಗಳು ಭರವಸೆ ನೀಡಿ ಗದ್ದಲಕ್ಕೆ ತೆರೆ ಎಳೆದರು.
ಇದನ್ನೂ ಓದಿ:ಮುಂದುವರೆದ ಎಂಇಎಸ್-ಶಿವಸೇನೆ ಉದ್ಧಟತನ : ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ