ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಹುಭಾಷಾ ನಟ ಪ್ರಕಾಶ್ ರೈ ಇಂದು ನಾಮಪತ್ರ ಸಲ್ಲಿಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪ್ರಕಾಶ್ ರೈ - ಪ್ರಕಾಶ್ ರೈ
ನಟ ಪ್ರಕಾಶ್ ರೈ ಇಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ನಾಮಪತ್ರ ಸಲ್ಲಿಸುವ ಮುನ್ನ ಬೆಳಗ್ಗೆ ಹಲಸೂರಿನಲ್ಲಿರುವ ಗಣಪತಿ ದೇವಸ್ಥಾನ, ತವಕ್ಕಲ್ ಮಸ್ತಾನ್ ದರ್ಗಾ ಹಾಗೂ ಸೆಂಟ್ ಫ್ರಾನ್ಸಿಸ್ ಚರ್ಚ್ಗೆ ಭೇಟಿ ನೀಡಿ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದರು. ನಂತರ ಶಾಂತಿನಗರ ವಿಧಾನಸಭಾ ಕ್ಷೇತ್ರದ ಆಸ್ಟಿನ್ ಟೌನ್ ಮೈದಾನದಿಂದ ಪ್ರಕಾಶ್ ರೈ ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜೊತೆ ಮೆರವಣಿಗೆ ಮೂಲಕ ಬಿಬಿಎಂಪಿ ಕೇಂದ್ರ ಕಚೇರಿಗೆ ಬಂದು ಪತ್ನಿ ಪೋನಿ ವರ್ಮಾ ಜೊತೆ ನಾಮಪತ್ರ ಸಲ್ಲಿಸಿದರು.
ಇನ್ನು ಪ್ರಕಾಶ್ ರೈ ನಾಮಪತ್ರ ಸಲ್ಲಿಸಿ ಹೊರಬಂದು ಕಾರು ಏರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಲು ಆರಂಭಿಸಿದರು. ಕಾರಿನ ಬಾಗಿಲ ಬಳಿಯೇ ನಿಂತ ಪ್ರಕಾಶ್ ರೈ 'ರೈತರ ಸಮಸ್ಯೆ ಏನಾಯ್ತು ಮೋದಿ...15 ಲಕ್ಷ ಏನಾಯ್ತು ಮೋದಿ' ಎಂದು ಪ್ರತಿಕ್ರಿಯಿಸಿ ಅಲ್ಲಿಂದ ನಡೆದರು.