ನವದೆಹಲಿ/ಬೆಂಗಳೂರು :ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯಡಿ ಕಾರ್ಯನಿರ್ವಹಿಸುವ ಭುವನೇಶ್ವರದ ಕೇಂದ್ರೀಯ ಪೆಟ್ರೋಕೆಮಿಕಲ್ಸ್ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಗೆ ಸೋಂಕು ನಿರೋಧಕ ಉಡುಗೆ-ತೊಡುಗೆಗಳ (ಪಿಪಿಇ ಕಿಟ್ಟು) ಗುಣಮಟ್ಟ ಪ್ರಮಾಣಿಕರಿಸುವ ಲೈಸನ್ಸ್ ದೊರೆತಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ತಿಳಿಸಿದ್ದಾರೆ.
ರಾಷ್ಟ್ರೀಯ ಮಾಪನ ಮತ್ತು ಪ್ರಮಾಣೀಕರಣ ಮಾನ್ಯತಾ ಮಂಡಳಿಯು ಭುವನೇಶ್ವರದ ಸಿಪೆಟ್ ಸಂಸ್ಥೆಗೆ ಈ ಮಾನ್ಯತೆ ನೀಡಿದೆ. ವೈದ್ಯರು, ಶುಶ್ರೂಷಕರು ಮತ್ತಿತರ ಆರೋಗ್ಯ ಸಿಬ್ಬಂದಿ ಸೋಂಕು ತಗುಲದಂತೆ ಧರಿಸುವ ಪಿಪಿಇ ಕಿಟ್‌ಗಳಲ್ಲಿ ಕೈಗವಸು, ಮೈಧಿರಿಸು, ಮುಖಗವಸು, ಗಾಗಲ್ಸ್ ಸೇರಿ ಮುಂತಾದ ವೈದ್ಯಕೀಯ ಸುರಕ್ಷಾ ಸಲಕರಣೆಗಳು ಸೇರಿವೆ. ಇವುಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ವಿಧಿಸುವ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಗುಣಮಟ್ಟ ಪರೀಕ್ಷೆ ಮಾಡಿ ಪ್ರಮಾಣೀಕರಿಸಬೇಕಾಗುತ್ತದೆ. ಭವನೇಶ್ವರದಲ್ಲಿ ಸಿಪೆಟ್ ಸಂಸ್ಥೆಯು ಇದಕ್ಕೆ ಬೇಕಾದ ಎಲ್ಲ ಪರೀಕ್ಷಾ ಸೌಲಭ್ಯವನ್ನು ಅಭಿವೃದ್ಧಿಪಡಿಸಿಕೊಂಡಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ನೂ ಕೆಲವು ಸಿಪೆಟ್ ಕೇಂದ್ರಗಳು ಇಂತಹ ಉಪಕರಣಗಳ ಗುಣಮಟ್ಟ ಪರೀಕ್ಷೆಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿವೆ. ಅವುಗಳಿಗೂ ರಾಷ್ಟ್ರೀಯ ಮಾಪನ ಮತ್ತು ಪ್ರಮಾಣೀಕರಣ ಮಾನ್ಯತಾ ಮಂಡಳಿಯ ಮಾನ್ಯತೆ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ “ಸ್ವಾವಲಂಬಿ ಭಾರತ” ಮತ್ತು “ಮೇಕ್ ಇನ್ ಇಂಡಿಯಾ” ಪರಿಕಲ್ಪನೆಗೆ ಸ್ವದೇಶಿ ಕೈಗಾರಿಕೆಗಳು ಸ್ಪಂದಿಸುತ್ತಿವೆ. ಕೊರೊನಾ ಸಾಂಕ್ರಾಮಿಕ ಹರಡುವ ಮುಂಚೆ ಪಿಪಿಇ ಕಿಟ್ಗಳಿಗಾಗಿ ನಾವು ಚೀನಾ ಮುಂತಾದ ಅನ್ಯ ದೇಶಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದೆವು.
ಆದರೆ, ಕಳೆದ ಮೂರು ತಿಂಗಳಲ್ಲಿ ಈ ವಲಯದಲ್ಲಿ ಸ್ವಾವಲಂಬಿಗಳಾಗಿದ್ದೇವೆ. ನಮ್ಮ ಸ್ವದೇಶಿ ಕಂಪನಿಗಳು ಪ್ರತಿದಿನ 4 ಲಕ್ಷಕ್ಕಿಂತ ಹೆಚ್ಚು ಪಿಪಿಇ ಕಿಟ್ಗಳನ್ನು ತಯಾರಿಸುತ್ತಿವೆ. ದೇಶೀಯವಾಗಿ ಈ ಸಲಕರಣೆಗಳನ್ನು ತಯಾರಿಸುವಾಗ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ಈ ದಿಸೆಯಲ್ಲಿ ನಮ್ಮ ಇಲಾಖೆಯ ಸಿಪೆಟ್ ಕೇಂದ್ರಗಳು ಗುರುತರ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದಿದ್ದಾರೆ.