ಬೆಂಗಳೂರು: ಬೆಂಗಳೂರಿನ ಬಹುತೇಕ ಎಲ್ಲ ಏರಿಯಾಗಳಲ್ಲಿ ಇಂದು ಹಾಗೂ ನಾಳೆ ವಿದ್ಯುತ್ ವ್ಯತ್ಯಯವಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ಪ್ರಮುಖವಾಗಿ ದಕ್ಷಿಣ ವೃತ್ತದ ಜಯನಗರ, ಕೋರಮಂಗಲ, ಹೆಚ್ಎಸ್ಆರ್ ಲೇಔಟ್ ವಿಭಾಗದಲ್ಲಿ ವಿದ್ಯುತ್ ಸಮಸ್ಯೆಯಾಗಲಿದ್ದು, ಪಶ್ಚಿಮ ವೃತ್ತದ ರಾಜಾಜಿನಗರ, ಆರ್.ಆರ್.ನಗರ, ಕೆಂಗೇರಿ ವಿಭಾಗದಲ್ಲೂ ವಿದ್ಯುತ್ ಅಡಚಣೆಯಾಗಲಿದೆ. ಇನ್ನು ಪೂರ್ವ ವೃತ್ತದ ಇಂದಿರಾನಗರ, ವೈಟ್ ಫೀಲ್ಡ್, ಶಿವಾಜಿನಗರ ಹಾಗೂ ವಿಧಾನಸೌಧ ವಿಭಾಗದ ಪ್ರದೇಶದಲ್ಲೂ ವಿದ್ಯುತ್ ಸಮಸ್ಯೆಯಾಗಲಿದೆ. ಉತ್ತರ ವೃತ್ತದ ಮಲ್ಲೇಶ್ವರಂ, ಜಾಲಹಳ್ಳಿ, ಹೆಬ್ಬಾಳ ಹಾಗೂ ಪೀಣ್ಯ ವಿಭಾಗದಲ್ಲೂ ಅಡಚಣೆಯಾಗಲಿದೆ.
ದೇಶದಲ್ಲಿ ಕಲ್ಲಿದ್ದಲ್ಲು ಬಿಕ್ಕಟ್ಟು ಉಂಟಾಗಿರುವ ಕಾರಣ ಕರ್ನಾಟಕ ಸೇರಿದಂತೆ ದೇಶದ ಕೆಲ ರಾಜ್ಯಗಳಲ್ಲಿ ವಿದ್ಯುತ್ ಕಡಿತ ಆರಂಭಗೊಂಡಿದ್ದು, ಅದರ ಭಾಗವಾಗಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಪ್ರಮುಖವಾಗಿ ತಮಿಳುನಾಡು, ರಾಜಸ್ಥಾನ, ದೆಹಲಿ, ಪಂಜಾಬ್, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇದರ ಸಮಸ್ಯೆ ಉದ್ಭವವಾಗಿದೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದು, ಇದರ ಬೆನ್ನಲ್ಲೇ ರಾಜಧಾನಿಯಲ್ಲಿ ಕರೆಂಟ್ ಕಟ್ ಮಾಡುವ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ದಕ್ಷಿಣ ವಲಯ, ಪೂರ್ವ ವಲಯ ಹಾಗೂ ಪಶ್ಚಿಮ ವಲಯದ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ.
ದಿನಾಂಕ 13ರಂದು ತುಮಕೂರು, ಮಧುಗಿರಿ, ಕುಣಿಗಲ್, ತಿಪಟೂರು ವಿಭಾಗಗಳಲ್ಲೂ ವಿದ್ಯುತ್ ಅಡಚಣೆ ಉಂಟಾಗಲಿದೆ. ಇದರ ಜೊತೆಗೆ ಕೋಲಾರ ವೃತ್ತದ ಕೋಲಾರ, ಕೆಜಿಎಫ್, ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ವಿಭಾಗದಲ್ಲೂ ಕರೆಂಟ್ ಸಮಸ್ಯೆಯಾಗಲಿದೆ.