ಕರ್ನಾಟಕ

karnataka

ETV Bharat / city

10 ದಿನಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳ ಗುಂಡಿ ಮುಚ್ಚಲು ಸೂಚನೆ: ಸಚಿವ ಅಶೋಕ್

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮುಂದುವರಿದಿದ್ದು, ಇನ್ನು ಹತ್ತು ದಿನಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

potholes on roads will fill in next 10 days says minister r ashok
ಸಚಿವ ಆರ್​ ಅಶೋಕ್ ಸುದ್ದಿಗೋಷ್ಟಿ

By

Published : Sep 30, 2021, 5:15 PM IST

ಬೆಂಗಳೂರು:ಇನ್ನು ಹತ್ತು ದಿನಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳ ಗುಂಡಿ ಹಾಗೂ ಮುಂದಿನ 25 ದಿನಗಳಲ್ಲಿ ಇಂಟೀರಿಯರ್ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಬೆಂಗಳೂರಲ್ಲಿ ಸುಮಾರು 13,874 ಕಿ.ಮೀ ರಸ್ತೆಗಳಿವೆ‌. 1346 ಕಿ.ಮೀ. ಆರ್ಟಿಯಲ್ ಮತ್ತು ಸಬ್ ಆರ್ಟಿಯಲ್ ರಸ್ತೆ ಇದ್ದು, ಇದರಲ್ಲಿ 895 ಕಿ.ಮೀ ರಸ್ತೆ ಸುಸ್ಥಿತಿಯಲ್ಲಿದೆ. ಈ ಪೈಕಿ 449 ಕಿ.ಮೀ. ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಸದ್ಯ 246 ಕಿ.ಮೀ. ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.

ಸಚಿವ ಆರ್. ಅಶೋಕ್ ಸುದ್ದಿಗೋಷ್ಟಿ

ರಸ್ತೆ ಗುಂಡಿ ಮುಚ್ಚಲು ಪ್ರತಿನಿತ್ಯ ಜಲ್ಲಿ‌ಮಿಕ್ಸ್ ಸ್ಥಾವರದಿಂದ 16 ಲೋಡ್ ಜಲ್ಲಿ ಮಿಕ್ಸ್ ಸರಬರಾಜು ಆಗುತ್ತದೆ. ಆದರೆ, ಕಳೆದ 12 ದಿನಗಳಿಂದ ಮಳೆಯಾದ ಕಾರಣ ಜಲ್ಲಿ ಮಿಕ್ಸ್ ಮಾಡಲು ಸಾಧ್ಯವಾಗಲಿಲ್ಲ.‌ ಹೀಗಾಗಿ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು 10 ದಿನದಲ್ಲಿ ಪ್ರಮುಖ ರಸ್ತೆಗಳ ಗುಂಡಿ ದುರಸ್ತಿ ಮಾಡಲು ಸೂಚನೆ ಕೊಟ್ಟಿದ್ದೇವೆ. ಒಳ ರಸ್ತೆಗಳನ್ನು 27 ದಿನಗಳೊಳಗೆ ಸ್ಥಳೀಯ ಗುತ್ತಿಗೆದಾರರ ಮೂಲಕ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಡೆಸಲು ಸೂಚಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಇತ್ತಿಚೀಗೆ ಸೇರಿದ 110 ಹಳ್ಳಿಗಳಿಗೆ ರಸ್ತೆ ಕಾಮಗಾರಿಗೆ 30ದಿನದಲ್ಲಿ ಚಾಲನೆ ಕೊಡುತ್ತೇವೆ ಎಂದರು.

ಶಿಥಿಲ‌ ಕಟ್ಟಡ ಶೀಘ್ರ ತೆರವಿಗೆ ಸೂಚನೆ:

2019ರ ಸರ್ವೆ ಪ್ರಕಾರ ಬೆಂಗಳೂರಲ್ಲಿ 185 ಶಿಥಿಲಾವಸ್ಥೆಯ ಕಟ್ಟಡಗಳನ್ನು ಗುರುತಿಸಲಾಗಿದೆ. ಈ ಪೈಕಿ ಕೇವಲ 10 ಕಟ್ಟಡವನ್ನು ತೆರವು ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲಾ ಶಿಥಿಲ ಕಟ್ಟಡ ತೆರವು ಮಾಡಲು ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದರು.

ಮನೆ ಮಾಲೀಕರಿಗೆ ನೋಟಿಸ್:

ಮನೆ ಮಾಲೀಕರಿಗೆ ನೋಟಿಸ್ ಕೊಡಲು ಸೂಚನೆ ನೀಡಲಾಗಿದೆ. ಉಳಿದಂತೆ ಯಾವುದಾದ್ರೂ ಶಿಥಿಲಾವಸ್ಥೆ ಕಟ್ಟಡದ ಬಗ್ಗೆ ಸರ್ವೆ ನಡೆಸಿ 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ಕಟ್ಟಡ ಪ್ಲಾನ್ ಸರಿಯಾಗಿ ನೀಡಬೇಕು. ಅಕ್ಕಪಕ್ಕದ ಮನೆ ನೋಡಿಕೊಂಡು ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ರೆ ಸಂಬಂಧಿಸಿದ ಇಂಜಿನಿಯರ್ ಮೇಲೆ ಕ್ರಮದ ಎಚ್ಚರಿಕೆ ನೀಡಿದ್ದೇನೆ ಎಂದರು.

ಶಿಥಿಲಾವಸ್ಥೆ ಕಟ್ಟಡ ಒಡೆಯಲು ಮನೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ನೋಟಿಸ್ ಕೊಟ್ಟು ಏಳು ದಿನ ಮನೆ ಖಾಲಿ ಮಾಡಲು ಕಾಲಾವಕಾಶ ನೀಡಲಾಗುತ್ತದೆ. ಮನೆ ಖಾಲಿ ಮಾಡದೇ ಇದ್ದಲ್ಲಿ ಬೆಸ್ಕಾಂ, ಜಲಮಂಡಳಿ ಸಂಪರ್ಕ ಕಡಿತ ಮಾಡಲಾಗುವುದು. ನೋಟಿಸ್ ನೀಡಿದ್ರೂ ಒಡೆಯದಿದ್ರೆ, ಪಾಲಿಕೆಯೇ ಒಡೆದು ಹಾಕಲಿದೆ. ತೆರವಿಗೆ ತಗುಲುವ ವೆಚ್ಚವನ್ನ ಕಟ್ಟಡ ಮಾಲೀಕರ ಆಸ್ತಿ ತೆರಿಗೆಗೆ ಸೇರಿಸಲು ಸೂಚನೆ ನೀಡಲಾಗಿದೆ ಎಂದರು.

ಒಂದು ವೇಳೆ ಅಕ್ಕಪಕ್ಕದ ಮನೆಗಳು ಶಿಥಿಲವಾಗಿದ್ದರೆ, ಸಾರ್ವಜನಿಕರು ಬಿಬಿಎಂಪಿ ಹಾಗೂ ನೇರವಾಗಿ ತನಗೆ ದೂರು ನೀಡಬಹುದು ಎಂದು ಇದೇ ವೇಳೆ ತಿಳಿಸಿದರು. ಕಳಪೆ ರಸ್ತೆ ಕಾಮಗಾರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವರ ಟೆಂಡರ್ ರದ್ದು ಮಾಡಲು ಅಧಿಕಾರಿಗಳಿಗೆ ಸೂಚಿಸ್ತೇನೆ. ಗುತ್ತಿಗೆದಾರರನ್ನೂ ಬ್ಲಾಕ್ ಲಿಸ್ಟ್​ಗೆ ಸೇರಿಸ್ತೇವೆ. ಇವತ್ತೇ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಆದೇಶ ನೀಡುತ್ತೇನೆ ಎಂದರು.

ಬೆಂಗಳೂರು ಉಸ್ತುವಾರಿ ಇಲ್ಲದಿರೋದೆ ಸಮಸ್ಯೆಗೆ ಕಾರಣನಾ ಎಂಬ ಪ್ರಶ್ನೆಗೆ, ಮಳೆ, ಕೋವಿಡ್, ನಗರೋತ್ಥಾನ ಉಸ್ತುವಾರಿ ನನಗೆ ಕೊಟ್ಟಿದ್ದಾರೆ. ಅದಕ್ಕಾಗಿ ಅಧಿಕಾರಿಗಳ ಸಭೆ ಮಾಡ್ತಿದ್ದೇನೆ. ಶೀಘ್ರವೇ ನಗರ ಉಸ್ತುವಾರಿ ಸಚಿವರ ಹೆಸರನ್ನ ಸಿಎಂ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಶೀಘ್ರ ಕೋವಿಡ್ ಪರಿಹಾರ ನೀಡಲು ಸೂಚನೆ:

ಬೆಂಗಳೂರಲ್ಲಿ ಕೋವಿಡ್​​ನಿಂದ ಅಂದಾಜು ಸುಮಾರು 15 ಸಾವಿರ ಜನ ಸಾವನ್ನಪ್ಪಿದ್ದಾರೆ. ಅವರ ಪಿ-ನಂಬರ್ ಆಧಾರದಲ್ಲಿ ಬಿಪಿಎಲ್ ಕುಟುಂಬದ ಮೃತನ ವಾರಸುದಾರನಿಗೆ ರಾಜ್ಯ ಸರ್ಕಾರದ ಒಂದು ಲಕ್ಷ ಹಾಗೂ ಕೇಂದ್ರ ಸರ್ಕಾರದ 50,000 ರೂ. ಸೇರಿ ಒಟ್ಟು 1.50 ಲಕ್ಷ ರೂ. ಪರಿಹಾರವನ್ನು ಶೀಘ್ರವಾಗಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

15 ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಿ, ಬಸವನ ಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಪರಿಹಾರ ವಿತರರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸೂಚಿಸಲಾಗಿದೆ. ಯಾರೆಲ್ಲ ಕೋವಿಡ್​ನಿಂದ ಸಾವನ್ನಪ್ಪಿದರು ಎಂಬ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ ಎಂದರು.

ಪರಿಹಾರಕ್ಕಾಗಿ ಒಂದೇ ಕುಟುಂಬದ ಇಬ್ಬರು ಅರ್ಜಿ ಸಲ್ಲಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಗಂಡ ಸತ್ತರೆ ಹೆಂಡತಿಗೆ ಪರಿಹಾರ ನೀಡುತ್ತೇವೆ. ಮಕ್ಕಳಿಗೆ ಪರಿಹಾರ ವಿಚಾರ ಬಂದಾಗ, ಮೂರ್ನಾಲ್ಕು ಮಕ್ಕಳಿದ್ರೆ, ಅವರೆಲ್ಲರೂ ಒಪ್ಪುವ ಒಬ್ಬರಿಗೆ ಮಾತ್ರ ಪರಿಹಾರ ಕೊಡುತ್ತೇವೆ. ಇಲ್ಲದಿದ್ರೆ ಯಾರಿಗೂ ಪರಿಹಾರ ನೀಡಲ್ಲ. ಈ ಸಂಬಂಧ ಸವಿವರವಾದ ಮಾರ್ಗಸೂಚಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಹೊರಡಿಸಲಿದ್ದಾರೆ ಎಂದರು.

ABOUT THE AUTHOR

...view details