ಬೆಂಗಳೂರು: ಕೋವಿಡ್ 3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಅಂದಾಜಿಸಿದಂತೆ ಏರಿಕೆ ಕಾಣುತ್ತಿದೆ. 200-300 ಅಸುಪಾಸಿನಲ್ಲಿ ಪತ್ತೆಯಾಗುತ್ತಿದ್ದ ಸೋಂಕಿತರ ಸಂಖ್ಯೆಯೀಗ ನಿತ್ಯ 30-40 ಸಾವಿರದ ಗಡಿ ದಾಟಿದೆ. ಸೋಂಕು ನಿಯಂತ್ರಣಕ್ಕೆ ಜಾರಿಗೆ ತಂದ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗೆ ವಿರೋಧ ಹೆಚ್ಚಾಗ್ತಿದೆ. ಹೀಗಾಗಿ ಇಂದು ಸಿಎಂ ನೇತೃತ್ವದಲ್ಲಿ ಕೋವಿಡ್ ಸಭೆ ಕರೆಯಲಾಗಿದೆ.
ಎರಡು ವಾರಗಳ ವೀಕೆಂಡ್ ಕರ್ಫ್ಯೂನಿಂದಾಗಿ ಹೆಚ್ಚುವರಿಯಾಗಿ ಪತ್ತೆಯಾಗಬಹುದಾದ ಪ್ರಕರಣಗಳು ಇಳಿಕೆಯಾಯಿತೇ? ಎನ್ನುವ ಪ್ರಶ್ನೆಗೆ ಹೌದು ಅಂತಿವೆ ವರದಿಗಳು. ಇನ್ನು ನೈಟ್ ಕರ್ಫ್ಯೂ ಬಿಟ್ಟು ಉಳಿದ ಎಲ್ಲ ನಿಯಮಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿಯು ವರದಿ ನೀಡಿದೆ. ನಿನ್ನೆ ಸಭೆಯ ಅಭಿಪ್ರಾಯಗಳನ್ನು ಪರಿಗಣಿಸಿ ವರದಿ ನೀಡಿದ್ದು, ಏಕೆ ವೀಕೆಂಡ್ ಕರ್ಫ್ಯೂ ತೆರವು ಮಾಡಬಹುದು ಎಂಬುದಕ್ಕೆ ವಿವರಣೆ ನೀಡಿದೆ.
ಎರಡು ವಾರದ ವೀಕೆಂಡ್ ಕರ್ಫ್ಯೂನಿಂದ ಆಗಿರುವ ಲಾಭ ಏನು ಎಂಬುದರ ಬಗ್ಗೆ IISC ಹಾಗೂ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆ ವರದಿ ನೀಡಿದೆ. ಈ ವರದಿಯನ್ನು ಸರ್ಕಾರದ ಮುಂದೆ ತಜ್ಞರು ಮಂಡಿಸಲಿದ್ದಾರೆ.