ಬೆಂಗಳೂರು:ಕೆ.ಆರ್.ಪುರದಲ್ಲಿನ ಭಟ್ರಹಳ್ಳಿ ಸಮೀಪದ ಸೀಗೆಹಳ್ಳಿ ಕೆರೆ ದಿನದಿಂದ ದಿನಕ್ಕೆ ಹೆಚ್ಚು ಮಲಿನಗೊಳ್ಳುತ್ತಿದೆ. ಶುದ್ಧವಾಗಿದ್ದ ಕೆರೆ ನೀರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಸುಮಾರು 30 ಎಕರೆ ಪ್ರದೇಶದಲ್ಲಿರುವ ಈ ಕೆರೆ ಮೊದಲು ಚೆನ್ನಾಗಿಯೇ ಇತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿಬಿಎಂಪಿಯು ಇದನ್ನು ಅಭಿವೃದ್ಧಿಪಡಿಸಿದೆ. ಆದರೆ ಮಳೆ ನೀರು ಮತ್ತು ಕೊಳಚೆ ನೀರು ಹರಿಯಲು ಪ್ರತ್ಯೇಕ ಮಾರ್ಗವಿಲ್ಲದೆ ಎರಡೂ ನೀರು ಕೆರೆಗೆ ಸೇರಿ ಮಲಿನವಾಗುತ್ತಿದೆ. ಕೊಳಚೆ ನೀರಿನ ದುರ್ವಾಸನೆ ಸಹಿಸಲು ಆಗುವುದಿಲ್ಲ ಎಂದು ಕೆ.ಆರ್.ಪುರ ನಿವಾಸಿಗಳು ದೂರುತ್ತಿದ್ದಾರೆ.
ಕೆರೆಗೆ ತ್ಯಾಜ್ಯ ಸೇರದಿರಲು ಕಲ್ಲಿನ ತಡೆಗೋಡೆ ರೀತಿ ನಿರ್ಮಿಸಲಾಗಿದೆ. ಬೇಲಿಯನ್ನೂ ಹಾಕಲಾಗಿದೆ. ಆದರೆ ಮಳೆ ನೀರು ಮತ್ತು ಕೊಳಚೆ ನೀರು ಒಂದೇ ಕಡೆಗೆ ಸೇರುವಂತೆ ಮಾಡಲಾಗಿದೆ. ಮಳೆ ಬಂದಾಗ ಅಥವಾ ಕೊಳಚೆ ನೀರಿನ ಹರಿವು ಜಾಸ್ತಿಯಾದಾಗ, ತಡೆಗೋಡೆ ದಾಟಿ ಕೆರೆ ಸೇರುತ್ತಿದೆ. ಹಾಗಾಗಿ ಕೆರೆಯ ವಿನ್ಯಾಸವನ್ನೇ ಬದಲಾಯಿಸುವ ಅಗತ್ಯವಿದೆ. ಮಳೆ ಮತ್ತು ಕೊಳಚೆ ನೀರು ಬಂದು ಸೇರುವ ಕೊಳವೆಗಳನ್ನು ಒಂದೇ ಕಡೆ ಜೋಡಿಸಿದ್ದಾರೆ. ಆ ಕೊಳವೆಗಳಲ್ಲಿ ಕಸ, ಹೂಳು ತುಂಬಿಕೊಳ್ಳುವುದರಿಂದ ನೀರು ಮೇಲೆಯೇ ಹರಿಯುತ್ತದೆ. ಪೈಪ್‌ಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸುವ ಕೆಲಸವೂ ಆಗುತ್ತಿಲ್ಲ ಇದೂ ಕೆರೆ ನೀರು ಮಲಿನ ಆಗಲು ಪ್ರಮುಖ ಕಾರಣವಾಗಿದೆ. ಮೋರಿ, ರಾಜಕಾಲುವೆಗಳಿಂದ ಬರುವ ಕೊಳಚೆ ನೀರಿನಲ್ಲಿ ಕಸ-ಕಡ್ಡಿ, ಪ್ಲಾಸ್ಟಿಕ್ ವಸ್ತುಗಳು ಬಂದು ಕೆರೆಯ ಪರಿಸರವನ್ನು ಹಾಳು ಮಾಡುತ್ತಿದೆ.