ಬೆಂಗಳೂರು: ಕೊರೊನಾ ಸಾವು, ಸಾಂಕ್ರಾಮಿಕ ರೋಗಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ನಾಯಕರು ವಿಕೃತಾನಂದ ಪಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೊನಾ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ. ವಿದೇಶಗಳ ಜನಸಂಖ್ಯೆ ಹಾಗೂ ಮರಣದ ಪ್ರಮಾಣ ಮತ್ತು ಭಾರತದ ಜನಸಂಖ್ಯೆ ಹಾಗೂ ಮರಣದ ಪ್ರಮಾಣ ಎಲ್ಲವನ್ನು ಹೋಲಿಕೆ ಮಾಡಿ ನೋಡಲಿ ಎಂದು ಅಂಕಿ -ಅಂಶಗಳ ಸಮೇತ ತಿರುಗೇಟು ನೀಡಿದರು.
ಇಟಲಿಯಲ್ಲಿ ನರೇಂದ್ರ ಮೋದಿ ಪ್ರಧಾನಿಯಲ್ಲ. ಈಗ ನಾವು ಈ ಸಾವು ನೋವಿಗೆ ಚೀನಾ ವೈರಸ್ ನ್ನು ದೂರಬೇಕೆ ಹೊರತು ನರೇಂದ್ರ ಮೋದಿಯವರನ್ನಲ್ಲ ಎಂದು ರಾಷ್ಟ್ರ ಹಾಗೂ ರಾಜ್ಯದ ಪ್ರತಿಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದರು.
ಬಾಧಿಸುತ್ತಿರುವ ವೈರಾಣು ಪ್ರಮಾಣ ಹೆಚ್ಚುತ್ತಿರುವ ಕಾರಣ ನಮ್ಮ ಸಿದ್ಧತೆ ಸಾಕಾಗಿಲ್ಲ ಎನ್ನುವುದನ್ನು ನಾನೂ ಒಪ್ಪುತ್ತೇವೆ. ವ್ಯಾಕ್ಸಿನ್ ವಿಚಾರದಲ್ಲಿ ಅಪಪ್ರಚಾರ ನಡೆದಿದ್ದರಿಂದ ಸುಮಾರು 45 ಲಕ್ಷ ವ್ಯಾಕ್ಸಿನ್ ನಾಶವಾಯಿತು. ಅಪಪ್ರಚಾರ ಮಾಡಿದ್ದೇ ಇದಕ್ಕೆ ಕಾರಣವೆಂದು ಪ್ರತಿಪಕ್ಷ ನಾಯಕರ ವಿರುದ್ಧ ಸಿ ಟಿ ರವಿ ದೂರಿದರು.
ಪ್ರತಿಪಕ್ಷಗಳ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ಆರಂಭದಲ್ಲಿ ಗೊಂದಲ ಇದ್ದದ್ದು ನಿಜ. ಎಲ್ಲರಿಗೂ ಜವಾಬ್ದಾರಿ ನೀಡಲಾಗಿದೆ. ಅವರು ಸಮರ್ಥವಾಗಿ ಮಾಡುತ್ತಿದ್ದಾರೆ ಎಂದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾವಾಗಲು ನಮ್ಮ ನಾಯಕರೆ, ಯಡಿಯೂರಪ್ಪ ಅವರನ್ನು ಖಳನಾಯಕ ಅಂತ ನಾವು ಯಾವತ್ತು ಭಾವಿಸಿಲ್ಲ ಎಂದು ಹೆಚ್ ಡಿ ಕೆ ಹೇಳಿಕೆಗೆ ತಿರುಗೇಟು ನೀಡಿದರು.
ಪ್ರತಿಪಕ್ಷದ ನಾಯಕರು ನಮ್ಮ ನಾಯಕರನ್ನು ನಾಯಕ ಎಂದು ಒಪ್ಪಿದ್ದಾರೆ. ಅವರ ಅಭಿಪ್ರಾಯ ಬದಲಾಗದೆ ಇರಲಿ. ಪ್ರತಿಪಕ್ಷದ ನಾಯಕರಿಗೆ ಯಡಿಯೂರಪ್ಪ ಕೆಲವು ಸಂದರ್ಭದಲ್ಲಿ ನಾಯಕನಾಗಿ, ಕೆಲವು ಸಂದರ್ಭಗಳಲ್ಲಿ ಖಳನಾಯಕರಾಗಿ ಕಾಣುತ್ತಾರೆ. ಅವರ ಅಭಿಪ್ರಾಯ ಹಾಗೆ ಇರಲಿ ಎಂದರು.