ಬೆಂಗಳೂರು: ಕೋವಿಡ್ ಅಟ್ಟಹಾಸ ಕಡಿಮೆಯಾಯಿತು ಅನ್ನುವಷ್ಟರಲ್ಲಿ ಇದೀಗ ರಾಜ್ಯದಲ್ಲಿ ಕೊರೊನಾದ ಎರಡನೇ ಅಲೆ ವೇಗವಾಗಿ ವ್ಯಾಪಿಸುತ್ತಿದೆ. ಸರ್ಕಾರ ಇದಕ್ಕಾಗಿ ಸಾರ್ವಜನಿಕರು ನಿರ್ಲಕ್ಷ್ಯದತ್ತ ಬೊಟ್ಟು ಮಾಡುತ್ತಿದೆ. ಆದರೆ, ಜನಪ್ರತಿನಿಧಿಗಳೇ ಕೊರೊನಾ ಮಾರ್ಗಸೂಚಿಯನ್ನು ಗಾಳಿಗೆ ತೂರುತ್ತಿದ್ದಾರೆ. ಸದ್ಯ ನಡೆಯುತ್ತಿರುವ ಅಧಿವೇಶನವೇ ಇದಕ್ಕೆ ಕೈಗನ್ನಡಿಯಂತಿದೆ.
ಕೊರೊನಾ ಎರಡನೇ ಅಲೆ ಮತ್ತೆ ಅಬ್ಬರಿಸುತ್ತಿದೆ. ರಾಜ್ಯದಲ್ಲಿ ಕೊರೊನಾದ ಎರಡನೇ ಅಲೆ ತನ್ನ ಕಬಂದ ಬಾಹುವನ್ನು ವಿಸ್ತರಿಸುತ್ತಿದೆ. ರಾಜ್ಯಾದ್ಯಂತ ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಕೊರೊನಾ ವೇಗವಾಗಿ ಹಬ್ಬುತ್ತಿರುವುದು ಸರ್ಕಾರದ ನಿದ್ದೆಗೆಡಿಸಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾದ ಎರಡನೇ ಅಲೆ ತಾರಕಕ್ಕೇರಿದೆ. ರಾಜ್ಯದಲ್ಲೂ ಇದೀಗ ಕೊರೊನಾದ ಎರಡನೇ ಅಲೆ ತನ್ನ ಕಪಿಮುಷ್ಟಿಯನ್ನು ಬಲಗೊಳಿಸುತ್ತಿದೆ. ಇತ್ತ ಸರ್ಕಾರ ಸಾರ್ವಜನಿಕರತ್ತ ಬೊಟ್ಟು ಮಾಡಿ ನಿರ್ಲಕ್ಷ್ಯ ತೋರಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಕೆ ನೀಡುತ್ತಿದೆ. ಆದರೆ ಅಸಲಿಗೆ ಜನಪ್ರತಿನಿಧಿಗಳೇ ಕೊರೊನಾವನ್ನು ಲಘುವಾಗಿ ಪರಿಗಣಿಸಿದ್ದಾರೆ.
ಅಧಿವೇಶನದಲ್ಲೇ ಜನನಾಯಕರ ನಿರ್ಲಕ್ಷ್ಯ
ಸದ್ಯ ಒಂದು ತಿಂಗಳ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಅಲ್ಲಿ ಕೊರೊನಾ ಮಾರ್ಗಸೂಚಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅಧಿವೇಶನ ಸಂಬಂಧ ಎಲ್ಲಾ ಮುಂಜಾಗ್ರತಾ ಕ್ರಮವನ್ನೇನೋ ಸರ್ಕಾರ ಕೈಗೊಂಡಿದೆ. ಆದರೆ, ಜನನಾಯಕರು ಮಾತ್ರ ಅದನ್ನು ಪಾಲಿಸುವಲ್ಲಿ ಹೆಚ್ಚಿನ ತಲೆಕೆಡಿಸಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಕಳೆದ ವರ್ಷ ನಡೆದ ಅಧಿವೇಶನದಲ್ಲಿ ಜನನಾಯಕರು ಕೋವಿಡ್ ಸಂಬಂಧ ಎಲ್ಲಾ ಮುಂಜಾಗ್ರತ ಕ್ರಮ, ಮಾರ್ಗಸೂಚಿಯನ್ನು ಪಾಲಿಸುತ್ತಿದ್ದರು. ಆದರೆ ಈಗ ಆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ, ನಿರ್ಲಕ್ಷ್ಯ ತೋರುತ್ತಿರುವುದು ಕಾಣಿಸುತ್ತಿದೆ. ಜನರಿಗೆ ಬುದ್ಧಿವಾದ ಹೇಳುವ ಜನನಾಯಕರೇ ಕೊರೊನಾ ಮುಂಜಾಗ್ರತಾ ಕ್ರಮವನ್ನು ಮರೆತಂತಿದೆ.