ಬೆಂಗಳೂರು: ರಾಜ್ಯ ವಿಧಾನಸಭೆಗೆ ಸಾರ್ವಜನಿಕ ಚುನಾವಣೆ ನಡೆಯುವುದು ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಎಲೆಕ್ಷನ್ ಜ್ವರ ಏರತೊಡಗಿದೆ. ಕರ್ನಾಟಕದಲ್ಲಿ ಭದ್ರ ನೆಲೆ ಇರುವ ಹಾಗು ನೆಲೆಯೇ ಇಲ್ಲದ ರಾಜಕೀಯ ಪಕ್ಷಗಳು ಸಹ ಕರ್ನಾಟಕದ ವಿಧಾನಸಭೆ ಮೇಲೆ ಕಣ್ಣಿಟ್ಟಿದ್ದು ಬಿರುಸಿನ ಚುನಾವಣೆ ಪೂರ್ವ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.
ಆಡಳಿತಾರೂಢ ಬಿಜೆಪಿಯ, ಪ್ರತಿಪಕ್ಷ ಕಾಂಗ್ರೆಸ್ನ ಹೈಕಮಾಂಡ್ ಈಗಾಗಲೇ ಒಂದು ಸುತ್ತು ರಾಜ್ಯಕ್ಕೆ ಭೇಟಿ ನೀಡಿ ಪಕ್ಷದ ಪ್ರಮುಖರ ಸಭೆ ನಡೆಸಿ ಚುನಾವಣೆ ಸಿದ್ಧತೆಗಳು ಹೇಗಿರಬೇಕೆನ್ನುವ ಬಗ್ಗೆ ಸೂಚನೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವರಾದ ಬಿಜೆಪಿ ಹೈಕಮಾಂಡ್ ಏಪ್ರಿಲ್ ಮೊದಲವಾರ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಸಿ ಚುನಾವಣೆ ತಾಲೀಮು ಆರಂಭಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಸಹ ರಾಜ್ಯಕ್ಕೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಹಿರಿಯರ ಸಭೆ ನಡೆಸಿ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಬಿಜೆಪಿ ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಆಪ್, ಎನ್ಸಿಪಿಗಳಿಂದಲೂ ಕಣ್ಣು:ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ರಾಜ್ಯಕ್ಕೆ ಭೇಟಿ ನೀಡಿದ ಬೆನ್ನಲ್ಲಿಯೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷ ಹಾಗು ಮಹಾರಾಷ್ಟ್ರದ ಹಿರಿಯ ನಾಯಕ ಶರದ್ ಪವಾರ್ ನೇತೃತ್ವದ ಎನ್ಸಿಪಿ ಕರ್ನಾಟಕ ಚುನಾವಣೆ ಮೇಲೆ ಕಣ್ಣಿಟ್ಟಿವೆ. ಕಳೆದ ವಾರ ಶರದ್ ಪವಾರ್ ಅವರು ಬೆಂಗಳೂರಿಗೆ ಭೇಟಿ ನೀಡಿ ಬಾಣಸವಾಡಿನಲ್ಲಿ ಪಕ್ಷದ ಕಚೇರಿ ಆರಂಭಿಸಿದ್ದಾರೆ. ದೇವನಹಳ್ಳಿಯಲ್ಲಿ ರ್ಯಾಲಿ ನಡೆಸಿದ್ದಾರೆ.
ಈ ಬೆಳವಣಿಗೆಯ ನಡುವೆ ಆಮ್ ಆದ್ಮಿ ಪಕ್ಷವೂ ಪಂಜಾಬ್ ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಕರ್ನಾಟಕ ರಾಜಕಾರಣಕ್ಕೆ ಪ್ರವೇಶಿಸಲು ಉತ್ಸುಕವಾಗಿದೆ. ಮೊನ್ನೆಯಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬೆಂಗಳೂರಿಗೆ ಭೇಟಿ ನೀಡಿ ರೈತ ಸಮಾವೇಶದಲ್ಲಿ ಭಾಗವಹಿಸಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಮಾಡುವ ಮುನ್ಸೂಚನೆ ನೀಡಿದ್ದಾರೆ. ಬೆಂಗಳೂರು ಪೊಲೀಸ್ ಕಮೀಶನರ್ ಆಗಿದ್ದ ಭಾಸ್ಕರರಾವ್ ಸ್ವಯಂ ನಿವೃತ್ತಿ ಪಡೆದು ಆಪ್ ಸೇರಿದ್ದಾರೆ. ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಹ ಆಪ್ ಪಾರ್ಟಿ ಸೇರಿದ್ದು ರಾಜ್ಯದಲ್ಲಿ ಆಮ್ ಆದ್ಮಿ ಚಟುವಟಿಕೆಗಳು ಚುರುಕುಪಡೆದಿದೆ.
ಬಿಜೆಪಿ, ಕಾಂಗ್ರೆಸ್ ,ಜೆಡಿಎಸ್ ನಿಂದ ರಾಜ್ಯ ಪ್ರವಾಸ :ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿವೆ. ಬಿಜೆಪಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರ ನೇತ್ರತ್ವದಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅನೇಕ ಸರ್ಕಾರಿ ಯೋಜನೆಗಳಿಗೆ ಚಾಲನೆನೀಡಿ ಸರ್ಕಾರದ ಪರ ಪ್ರಚಾರ ನಡೆಸಲಾಗುತ್ತಿದೆ.