ಬೆಂಗಳೂರು: ದಾಸಶ್ರೇಷ್ಠ ಕನಕದಾಸರ ಜಯಂತಿ ನಿಮಿತ್ತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ನಾಯಕರು ಶುಭ ಕೋರಿದ್ದಾರೆ.
ಕನ್ನಡದ ಪ್ರಸಿದ್ಧ ಕೀರ್ತನಕಾರರು, ಭಕ್ತಿ ಪಂಥದ ಹರಿದಾಸರಲ್ಲಿ ಪ್ರಮುಖರು, ಸಂತ, ಕವಿ, ಸಂಗೀತಗಾರರು, ದಾಸಶ್ರೇಷ್ಠ ಕನಕದಾಸರ ಜಯಂತಿಯ ಶುಭಾಶಯಗಳು. ಜನರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಕೀರ್ತನೆಗಳನ್ನು ರಚಿಸಿ ಬದುಕಿನ ಮಾರ್ಗವನ್ನು ತಿಳಿಸಿಕೊಟ್ಟ ಮಹಾನ್ ದಾರ್ಶನಿಕರಾದ ಕನಕದಾಸರಿಗೆ ನನ್ನ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.
ಇನ್ನು ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, ಶ್ರೀಕೃಷ್ಣನನ್ನು ಒಲಿಸಿಕೊಂಡ ದಾಸಶ್ರೇಷ್ಠರು, ಕನ್ನಡ ಕಾವ್ಯ ಪರಂಪರೆಯ ಮೇರು ಶಿಖರವೇ ಆಗಿರುವ ಕನಕದಾಸರ ಜಯಂತಿ ಇಂದು. ನಮ್ಮ ನೆಲದ ಅನನ್ಯ ತಾತ್ವಿಕ ಸಂತರಾದ ಅವರಿಗೆ ನನ್ನ ಶ್ರದ್ಧಾಪೂರ್ವಕ ನಮನಗಳು. ಆ ಪೂಜ್ಯರ ಮಾತುಗಳು ಸದಾ ಕಾಲ ನಮ್ಮ ಮನಗಳನ್ನು ಬೆಳಗಿಸುತ್ತಿವೆ ಎಂದಿದ್ದಾರೆ.
ವರ್ಣ ವ್ಯವಸ್ಥೆ ವಿರುದ್ಧ ಸಿಡಿದ ಬಸವಣ್ಣನ ಸಮಸಮಾಜ ಕಟ್ಟುವ, ಶ್ರಮಿಕ ಸಂಸ್ಕೃತಿಯ ಶ್ರೇಷ್ಠತೆಯನ್ನು ಸಾರುವ ಕಾಯಕವನ್ನು ಹದಿನೈದನೇ ಶತಮಾನದಲ್ಲಿ ಕಾವ್ಯ - ಕೀರ್ತನೆ - ಪ್ರತಿಭಟನೆಗಳಲ್ಲಿ ಮುಂದುವರಿಸಿದ ಸಮಾಜ ಸುಧಾರಕ ಕನಕದಾಸರ ಚಿಂತನೆಗಳು ನಮಗೆ ಆದರ್ಶವಾಗಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ಟೀಟ್ ಮಾಡಿ ಕನಕದಾಸ ಜಯಂತಿಯ ಶುಭ ಕೋರಿದ್ದಾರೆ.