ಕರ್ನಾಟಕ

karnataka

ETV Bharat / city

ಚುನಾವಣೆಗೆ ಈಗಲೇ ಸಜ್ಜಾಗುತ್ತಿರುವ ನಾಯಕರು: 3 ಪಕ್ಷಗಳಲ್ಲೂ ಗರಿಗೆದರಿದ ಚಟುವಟಿಕೆ

ಮುಂಬರುವ ಚುನಾವಣೆ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಸಮರೋಪಾದಿಯಲ್ಲಿ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದು ಸಂಘಟನೆ, ಜನಪ್ರಿಯತೆ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯಲು ಮುಂದಾಗಿದ್ದಾರೆ.

election
election

By

Published : Jun 26, 2021, 8:45 PM IST

ಬೆಂಗಳೂರು: ಕೋವಿಡ್ ಎರಡನೇ ಅಲೆ ಅಬ್ಬರ ಇಳಿಕೆ ಕಾಣುತ್ತಿದ್ದಂತೆ ರಾಜ್ಯ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕೋವಿಡ್ ಆತಂಕದಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಸಮರ್ಪಕವಾಗಿ ರಾಜಕೀಯ ಚಟುವಟಿಕೆ ನಡೆಸಲಾಗದ ಪಕ್ಷಗಳು, ಚುನಾವಣೆಗಳು ಎದುರಾಗುತ್ತಿರುವ ಹಿನ್ನೆಲೆ ಅನಿವಾರ್ಯವಾಗಿ ದೊಡ್ಡ ಮಟ್ಟದ ಸಿದ್ಧತೆಗೆ ಮುಂದಾಗಿವೆ.

ಚುನಾವಣೆ ಸಂದರ್ಭದಲ್ಲಿ ಜನರ ಬಳಿಗೆ ತೆರಳಬೇಕಾದ ಅನಿವಾರ್ಯತೆ ಇರುವ ಹಿನ್ನೆಲೆ ಅದಕ್ಕೂ ಮುನ್ನವೇ ಒಂದಿಷ್ಟು ಜನರ ಗಮನ ಸೆಳೆಯುವ ಚಟುವಟಿಕೆಗಳನ್ನು ಕೈಗೊಳ್ಳಲು ತೀರ್ಮಾನಿಸಿವೆ. ಈ ನಿಟ್ಟಿನಲ್ಲಿ ಮೂರು ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಬಿಜೆಪಿಯಲ್ಲಿ ಗರಿಗೆದರಿದ ಚಟುವಟಿಕೆಗಳು: ಪ್ರಮುಖ ರಾಷ್ಟ್ರೀಯ ಪಕ್ಷ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮುಂಬರುವ ಚುನಾವಣೆಗಳಿಗೆ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ನಿರಂತರವಾಗಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಆನ್​ಲೈನ್ ಹಾಗೂ ಆಫ್​​ಲೈನ್​ಗಳ ಮೂಲಕ ನಾಯಕರು ಸಭೆಗಳನ್ನು ನಡೆಸುತ್ತಿದ್ದು, ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತಿದ್ದಾರೆ.

ಇಂದು ಸಹ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ನಡೆದಿದ್ದು, ಮುಂಬರುವ ಚುನಾವಣೆಗಳಿಗೆ ಪಕ್ಷ ಯಾವ ರೀತಿ ಸಜ್ಜಾಗಬೇಕು ಎಂಬ ಕುರಿತು ಚರ್ಚೆ ನಡೆದಿದೆ. ಕಳೆದ ವಾರವಷ್ಟೇ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಬೆಂಗಳೂರಿಗೆ ಆಗಮಿಸಿ ರಾಜ್ಯ ನಾಯಕರ ಜೊತೆ ಚರ್ಚಿಸಿ ತೆರಳಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಮುಂಬರುವ ಚುನಾವಣೆಗಳನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿ ಸಿದ್ಧತೆ ನಡೆಸುತ್ತಿದ್ದಾರೆ. ಪಕ್ಷದ ಶಾಸಕರು ಹಾಗೂ ಸಚಿವರುಗಳಿಗೆ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಸೂಚಿಸಲಾಗುತ್ತದೆ.

ಕಾಂಗ್ರೆಸ್ ಬೆಳವಣಿಗೆ:ದೊಡ್ಡಮಟ್ಟದ ಪ್ರತಿಭಟನೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡನೆ, ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸುವ ಸಂಕಲ್ಪ ಸೇರಿದಂತೆ ಹಲವು ವಿಧದ ಕಾರ್ಯಕ್ರಮಗಳ ಮೂಲಕ ರಾಜ್ಯದ ಮುಂಬರುವ ಚುನಾವಣೆಗಳಿಗೆ ಸಜ್ಜಾಗುವ ಕಾರ್ಯದಲ್ಲಿ ಕಾಂಗ್ರೆಸ್ ಪ್ರಮುಖ ಹೆಜ್ಜೆ ಇಟ್ಟಿದೆ.

ಕೊಂಚಮಟ್ಟಿಗೆ ನಾಯಕತ್ವದ ವಿಚಾರವಾಗಿ ಎದುರಾಗಿರುವ ಗೊಂದಲವನ್ನು ಆದಷ್ಟು ತ್ವರಿತವಾಗಿ ನಿವಾರಿಸಿಕೊಳ್ಳಲು ಮುಂದಾಗಿರುವ ನಾಯಕರು, ರಾಜ್ಯ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿದ್ದಾರೆ. ಇಂದು ಸಹ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಆನ್​ಲೈನ್ ಮೂಲಕ ಸಭೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿ ಮುಂಬರುವ ದಿನಗಳಲ್ಲಿ ಎದುರಾಗುವ ಚುನಾವಣೆಗಳಿಗೆ ಪಕ್ಷ ಯಾವ ರೀತಿ ಸಜ್ಜಾಗುತ್ತಿದೆ ಎಂಬ ಮಾಹಿತಿ ಒದಗಿಸಿ ಬಂದಿದ್ದಾರೆ.

ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಾಗೂ ಪಕ್ಷ ಬಲವರ್ಧನೆ ಎರಡನ್ನೂ ಏಕಕಾಲದಲ್ಲಿ ಮಾಡಿಕೊಂಡು ಸಾಗಿ ಎಂದು ಸೂಚಿಸಿದ್ದಾರೆ. ಸ್ಥಳೀಯ ಸಂಸ್ಥೆ ಬಿಬಿಎಂಪಿ ಹಾಗೂ ಲೋಕಸಭೆ ಚುನಾವಣೆ ಪರಿಗಣಿಸಿರುವ ಕಾಂಗ್ರೆಸ್ ಪಕ್ಷ ಎಲ್ಲಕ್ಕಿಂತ ಮುಖ್ಯವಾಗಿ ವಿಧಾನಸಭೆ ಚುನಾವಣೆಯತ್ತ ತನ್ನ ದೃಷ್ಟಿ ನೆಟ್ಟಿದೆ.

ಜೆಡಿಎಸ್ ಬೆಳವಣಿಗೆ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಲೋಕಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಮಟ್ಟದ ನಿರೀಕ್ಷೆ ಹೊಂದಿರದ ಜೆಡಿಎಸ್ ಪಕ್ಷ ಸಾಧ್ಯವಾದಷ್ಟು ಬಿಬಿಎಂಪಿ ಚುನಾವಣೆಯತ್ತ ಹೆಚ್ಚಿನ ಗಮನಹರಿಸಲು ತೀರ್ಮಾನಿಸಿದೆ. ಎರಡು ದಿನ ಹಿಂದೆ ಜೆಡಿಎಸ್ ಕಚೇರಿಗೆ ಭೇಟಿಕೊಟ್ಟಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ.ದೇವೇಗೌಡ ಮುಂಬರುವ ಬಿಬಿಎಂಪಿ ಚುನಾವಣೆಗೆ ಸಜ್ಜಾಗುವಂತೆ ಪಕ್ಷದ ನಾಯಕರಿಗೆ ಕರೆ ಕೊಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಬೆಂಗಳೂರು ನಗರ ಘಟಕದ ನಾಯಕರು ಒಂದರ ಬೆನ್ನಿಗೆ ಒಂದರಂತೆ ಮೂರು ಪ್ರಮುಖ ಸಭೆಗಳನ್ನು ನಡೆಸಿದ್ದಾರೆ.

ಇಂದು ಸಹ ಪಕ್ಷದ ಕಚೇರಿಗೆ ಭೇಟಿಕೊಟ್ಟಿದ್ದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್. ಕೆ.ಕುಮಾರಸ್ವಾಮಿ ಸೋಮವಾರ ಬೆಂಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಘೋಷಣೆ ಮಾಡಿದ್ದಾರೆ. ಮುಂಬರುವ ಎಲ್ಲ ಚುನಾವಣೆಗಳ ಜೊತೆಗೆ ಅತ್ಯಂತ ಪ್ರಮುಖವಾಗಿ ಬಿಬಿಎಂಪಿ ಚುನಾವಣೆಯತ್ತ ಜೆಡಿಎಸ್ ಪಕ್ಷ ಕಣ್ಣಿಟ್ಟಿದೆ. ಇದಕ್ಕೆ ಪೂರಕ ಚಟುವಟಿಕೆಗಳನ್ನೂ ಆರಂಭಿಸಿದೆ.

ಒಟ್ಟಾರೆ ಮೂರು ರಾಜಕೀಯ ಪಕ್ಷಗಳು ತಮ್ಮದೇ ಆದ ನಿಟ್ಟಿನಲ್ಲಿ ಚುನಾವಣೆಗೆ ಸಜ್ಜಾಗುವ ಕಾರ್ಯದಲ್ಲಿ ನಿರತರಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಚಟುವಟಿಕೆಯಲ್ಲಿ ತೊಡಗಲಿದ್ದಾರೆ.

ABOUT THE AUTHOR

...view details