ಕರ್ನಾಟಕ

karnataka

ETV Bharat / city

ಕೊರೊನಾ ಸವಾಲಿನ ನಡುವೆ ಪೊಲೀಸರ ಕರ್ತವ್ಯ ನಿಷ್ಠೆಗೆ ಸಲಾಂ! - ಕೊರೊನಾ ಸಮಯದಲ್ಲಿ ಪೊಲೀಸರ ಕಾರ್ಯ ವೈಖರಿ

ಕೊರೊನಾ ಸೋಂಕಿತರನ್ನು ದೂರದಿಂದಲೇ ನೋಡಿ ಹೆದರುತ್ತಿರುವ ಜನರ ನಡುವೆ ಸೋಂಕಿತರ ರಕ್ಷಣೆಗಾಗಿ ಹಗಲಿರುಳು ಆಸ್ಪತ್ರೆಯ ಮುಂದೆ ನಿಂತು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯವಾಗಿದೆ.

police working hard in corona emergency situation
ಡಿಸಿಪಿ‌ ರೋಹಿಣಿ ಸಫೆಟ್ ಕಟೋಚ್

By

Published : Jul 10, 2020, 8:28 PM IST

ಬೆಂಗಳೂರು: ಕೊರೊನಾ ವೈರಸ್ ಇಡೀ ಮನುಕುಲವನ್ನೇ ನಡುಗಿಸುವಂತೆ ಮಾಡಿದೆ‌‌‌. ವಾರಿಯರ್​​ಗಳಾಗಿ ಹೋರಾಡುತ್ತಿರುವ ಪೊಲೀಸರಿಗೂ ಕೊರೊನಾ ಬೆಂಬಿಡದೆ ಕಾಡುತ್ತಲೇ ಇದೆ‌. ಅದರಲ್ಲಿಯೂ ಕೊರೊನಾ ಆಸ್ಪತ್ರೆಗಳ ಮುಂದೆ ಕೆಲಸ‌ ಮಾಡುತ್ತಿರುವ ಪೊಲೀಸರು ಜೀವ ಕೈಯಲ್ಲಿ ಹಿಡಿದು ಕೆಲಸ‌ ಮಾಡುತ್ತಿದ್ದಾರೆ.

ಕೊರೊನಾ ಸೋಂಕಿತನನ್ನು ಇಡೀ‌‌ ಸಮಾಜ ನಿರ್ಲಕ್ಷ್ಯದ ಕಣ್ಣಿನಿಂದಲೇ ನೋಡುವಂತಾಗಿದೆ. ಜೀವಕ್ಕೆ ಹೆದರಿ‌ ಅನಿವಾರ್ಯವಾಗಿ ಆತಂಕದಿಂದಲೇ ಜನರು ಸೋಂಕಿತರಿಂದ ದೂರ‌ ಉಳಿಯುತ್ತಿದ್ದಾರೆ.‌ ಇತ್ತೀಚೆಗೆ ವರ್ತೂರು ಠಾಣಾ ವ್ಯಾಪ್ತಿಯಲ್ಲಿ ಕ್ವಾರಂಟೈನ್‌ ಮುಗಿಸಿಕೊಂಡು ಮನೆಗೆ ಬಂದಿದ್ದ ಪತ್ನಿಯನ್ನು ಕೊರೊನಾ‌ ಕಾರಣಕ್ಕಾಗಿ ಗಂಡ ಮನೆಗೆ ಸೇರಿಸಿಕೊಳ್ಳದ ನಿದರ್ಶನ ನಮ್ಮ‌ ಮುಂದಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕೆಲಸ‌ ಮಾಡುವ ಪೊಲೀಸರ ಕಾರ್ಯವೈಖರಿ ನಿಜಕ್ಕೂ ಸವಾಲಿನ ಸಂಗತಿಯೇ ಸರಿ‌‌.

ಕೊರೊನಾ ಸವಾಲಿನ ನಡುವೆ ಪೊಲೀಸರ ಕರ್ತವ್ಯ ನಿಷ್ಠೆ

ನಗರದ ದಕ್ಷಿಣ ವಿಭಾಗದ ವ್ಯಾಪ್ತಿಯಲ್ಲಿ ಬರುವ ವಿಕ್ಟೋರಿಯಾ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ‌ ಆರೋಗ್ಯ ಆಸ್ಪತ್ರೆಯ ಆವರಣದಲ್ಲಿ ಕಳೆದ‌‌‌ ಮೂರು ತಿಂಗಳಿಂದ ಪೊಲೀಸರು, ಹೋಮ್ ಗಾರ್ಡ್ಸ್ ಹಾಗೂ ಸೆಕ್ಯೂರಿಟಿ ಗಾರ್ಡ್​ಗಳು ಕನಿಷ್ಠ ‌ಸುರಕ್ಷಿತ ಕ್ರಮಗಳೊಂದಿಗೆ ಆತಂಕದಿಂದಲೇ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಆಸ್ಪತ್ರೆಯಾಗಿ ಪರಿವರ್ತನೆಯಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿವಿಪುರ ಪೊಲೀಸರು, ಕೆಎಸ್​ಆರ್​ಪಿ ಹಾಗೂ ಹೋಮ್ ಗಾರ್ಡ್ ಸೇರಿದಂತೆ 30ಕ್ಕಿಂತ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಚಿಕಿತ್ಸಾ ಅವಧಿಯಲ್ಲಿ ಸೋಂಕಿತರು ಓಡಿ ಹೋಗದಂತೆ ನೋಡಿಕೊಳ್ಳುವುದು, ಗಲಾಟೆಯಾಗದಂತೆ ನಿಗಾ ವಹಿಸುವುದು ಇವರ ಕೆಲಸವಾಗಿದೆ‌.

ಕೊರೊನಾ ಬರುವ ಮುಂಚಿನಿಂದಲೂ ಕೆಲಸ‌ ಮಾಡುತ್ತಿದ್ದೇನೆ. ಮೊದಮೊದಲು ನನಗೂ ಸಹ ಇಲ್ಲಿ ಕೆಲಸ‌ ಮಾಡೋದಕ್ಕೆ ಭಯ ಆಗುತಿತ್ತು. ಯಾಕೆಂದರೆ 500 ಹಾಸಿಗೆ ಸೌಲಭ್ಯವಿರುವ ವಿಕ್ಟೋರಿಯಾದಲ್ಲಿ ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಸೋಂಕಿತರಾಗಿ ಆಡ್ಮಿಟ್ ಆಗುತ್ತಾರೆ. ಇದುವರೆಗೂ ಸಾವಿರಾರು ಸಂಖ್ಯೆಯಲ್ಲಿ ಜನರು ಕೊರೊನಾ ಸ್ವ್ಯಾಬ್​​​​ ಟೆಸ್ಟ್​ಗೆ ಒಳಗಾಗಿದ್ದಾರೆ‌‌‌‌. ಯಾವ ಸಂದರ್ಭದಲ್ಲಾದರೂ ಸೋಂಕು ತಗುಲುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ವಿವಿ ಪುರ ಠಾಣೆಯಲ್ಲಿ ಕೆಲಸ ಮಾಡುವ ಹತ್ತಾರು ಸಿಬ್ಬಂದಿಗೆ‌ ಸೋಂಕು ದೃಢವಾಗಿ ಕ್ವಾರಂಟೈನ್​​ನಲ್ಲಿದ್ದಾರೆ ಎಂದು ವಿಕ್ಟೋರಿಯಾ ಔಟ್ ಪೋಸ್ಟ್ ಠಾಣೆಯ ಕಾನ್ಸ್​ಟೇಬಲ್​​​​ ಪ್ರಭು ಹೇಳುತ್ತಾರೆ.

ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವುದು ಖುಷಿ ತಂದರೆ, ಇನ್ನೊಂದೆಡೆ ಅಳುಕಿನಿಂದಲೇ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿನ ಭಯ ಹೋಗಲಾಡಿಸಲು ಡಿಸಿಪಿ ಡಾ. ರೋಹಿಣಿ ಕಟೋಚ್ ಸಫೆಟ್ ಅವರು ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್, ಮಾಸ್ಕ್ ನೀಡಿದ್ದಾರೆ. ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದರೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮನೆಯಲ್ಲಿ ಏನು ಹೇಳೋದಿಲ್ವಾ ಎಂದು ಪ್ರಶ್ನಿಸಿದರೆ, ಖಂಡಿತಾ ಇಲ್ಲ. ಯಾಕೆಂದರೆ ನನ್ನ ಪತ್ನಿ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಮುಂಜಾಗ್ರತಾ ಕ್ರಮ ಅನುಸರಿಕೊಂಡು ಕೆಲಸ ಮಾಡಿ ಎಂದು ಹೇಳುತ್ತಾರೆ. ನಮ‌್ಮ‌ ಮನೆಯ ಪರಿಸ್ಥಿತಿಯಂತೆ ನನ್ನ ಸಹದ್ಯೋಗಿಗಳ‌ ಮನೆಗಳ ಪರಿಸ್ಥಿತಿ ವಿಭಿನ್ನವಾಗಿದೆ. ಎಷ್ಟೋ ಸಿಬ್ಬಂದಿಗೆ ವಿಕ್ಟೋರಿಯಾದಲ್ಲಿ ಕೆಲಸ ಮಾಡಬೇಡಿ ಎಂದು ಮನೆಯವರು ಒತ್ತಾಯಿಸಿದ ನಿರ್ದಶನಗಳಿವೆ ಎನ್ನುತ್ತಾರೆ ಪ್ರಭು.

ಕೊರೊನಾ‌ ಹಾಟ್ ಸ್ಪಾಟ್​ಗಳಲ್ಲಿ‌ ಕೆಲಸ‌ ಮಾಡುತ್ತಿರುವ ನಮ್ಮ ಪೊಲೀಸರಿಗೆ ನಿಜಕ್ಕೂ‌ ಧನ್ಯವಾದ ಅರ್ಪಿಸಲೇಬೇಕು. ‌ಕೊರೊನಾ‌ ನಿಯಂತ್ರಣ ವೇಳೆ ನಮ್ಮ ಪೊಲೀಸ್ ಸಿಬ್ಬಂದಿ ಕೊರೊನಾ ಸೋಂಕು ತಗುಲಿ ಹಲವು ಪೊಲೀಸ್ ಠಾಣೆಗಳು ಸಿಲ್ ಡೌನ್‌ ಆಗಿವೆ. ಹಲವು ಮಂದಿ ಪೊಲೀಸರು ಸೋಂಕಿಗೆ ಒಳಗಾಗಿ ಕ್ವಾರಂಟೈನ್​​ನಲ್ಲಿದ್ದಾರೆ. ‌ಈ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿಯೂ ಕೊರೊನಾ ಆಸ್ಪತ್ರೆಗಳ ಮುಂದೆ ಪಾಳಿಯಂತೆ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದು ಡಿಸಿಪಿ‌ ರೋಹಿಣಿ ಸಫೆಟ್ ಕಟೋಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details