ಬೆಂಗಳೂರು: ಹಳೆ ನೋಟು ಅಪನಗದೀಕರಣಗೊಂಡು ಹಲವು ವರ್ಷಗಳೂ ಕಳೆದರೂ ನಕಲಿ ನೋಟು ದಂಧೆಯಲ್ಲಿ ಭಾಗಿಯಾಗಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸಿ 5.80 ಕೋಟಿ ನಿಷೇಧಿತ ಹಾಗೂ ಖೋಟಾನೋಟು ಜಪ್ತಿ ಮಾಡಿಕೊಂಡಿದ್ದ ಗೋವಿಂದಪುರ ಪೊಲೀಸರು ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಕಿಂಗ್ ಪಿನ್ಗಳಿಗಾಗಿ ಬಲೆ ಬೀಸಿದ್ದಾರೆ.
5.80 ಕೋಟಿ ನಕಲಿ ನೋಟು ಜಪ್ತಿ ಪ್ರಕರಣ ಕಳೆದ ಎರಡು ದಿನಗಳ ಹಿಂದೆ ನಗರದಲ್ಲಿ ಏಳು ಮಂದಿ ಆರೋಪಿಗಳನ್ನು ಒಟ್ಟು 5.80 ಕೋಟಿ ರೂ. ಜಪ್ತಿ ಮಾಡಿಕೊಂಡಿದ್ದರು. ಈ ಪೈಕಿ ಮೌಲ್ಯ ಕಳೆದುಕೊಂಡ 1000 ಹಾಗೂ 500 ರೂ. ಮೌಲ್ಯದ 80 ಲಕ್ಷ ಹಾಗೂ ಕೇರಳದ ಕಾಸರಗೂಡಿನ ಗೋದಾಮಿನಲ್ಲಿ 5 ಕೋಟಿ ಮೌಲ್ಯದ ಕಲರ್ ಜೆರಾಕ್ಸ್ ನೋಟುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಕಾಸರಗೂಡಿನಲ್ಲಿ ದಾಳಿ ಮಾಡುತ್ತಿದ್ದಂತೆ ಮಾಹಿತಿ ಅರಿತಿದ್ದ ಇಬ್ಬರು ಕಿಂಗ್ ಪಿನ್ಗಳು ಎಸ್ಕೇಪ್ ಆಗಿದ್ದರು.
ಇಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ
ಇದೀಗ ನಾಪತ್ತೆಯಾಗಿರುವ ಇಬ್ಬರು ಆರೋಪಿಗಳಿಗಾಗಿ ಗೋವಿಂದಪುರ ಪೊಲೀಸರ ವಿಶೇಷ ತಂಡ ಶೋಧ ಕಾರ್ಯ ಮುಂದುವರೆಸಿದೆ. ಇಬ್ಬರು ಆರೋಪಿಗಳ ಹೆಸರು, ವಿವರ ಹಾಗೂ ಸಿಡಿಆರ್ ಕರೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಪ್ತಿ ಮಾಡಿಕೊಂಡಿದ್ದ 24 ಮೂಟೆಗಳಲ್ಲಿ ಜಪ್ತಿ ಮಾಡಿಕೊಂಡಿರುವ 5 ಕೋಟಿ ರೂ. ಕಲರ್ ಜೆರಾಕ್ಸ್ ನೋಟಿನ ಜಾಲದ ಹಿಂದೆ ದೊಡ್ಡ ತಂಡವೇ ಕಾರ್ಯನಿರ್ವಹಿಸುತ್ತಿದ್ದು, ಕಾಸರಗೂಡಿಗೆ ದುಬೈ, ಪಾಕಿಸ್ತಾನದಿಂದ ನಕಲಿ ಹಣ ಜಾಲದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಚಾರಣೆ ವೇಳೆ, ಬಂಧಿತ ಆರೋಪಿಗಳು ಕಾಸರಗೂಡಿನಿಂದ ಇಬ್ಬರು ವ್ಯಕ್ತಿಗಳಿಂದ ನಕಲಿ ನೋಟು ತೆಗೆದುಕೊಳ್ಳುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಫಾರ್ಮ್ ಹೌಸ್ನಲ್ಲಿ ರಾಶಿ ರಾಶಿ ಜೆರಾಕ್ಸ್ ನೋಟು
ಫಾರ್ಮ್ ಹೌಸ್ನಲ್ಲೇ ಜೆರಾಕ್ಸ್ ನೋಟಿನ ರಾಶಿ ರಾಶಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೆ ಕಾರಸಗೋಡಿನ ಐದಾರು ಸ್ಥಳಗಳಲ್ಲಿ ನಕಲಿ ನೋಟು ಶೇಖರಿಸಿಟ್ಟಿರುವ ಬಗ್ಗೆ ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ತಮಿಳುನಾಡು ಮೂಲದ ಆರೋಪಿ ಮಂಜುನಾಥ್ ಗೆ ಕಿಂಗ್ ಪಿನ್ ನೇರ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ. ಮೊದಲು ಬಡ್ಡಿ ಹಣದ ವ್ಯವಹಾರ ಮಾಡುತ್ತಿದ್ದ ಈತ ಕಿಂಗ್ ಪಿನ್ ಸಂಪರ್ಕ ಬೆಳೆಸಿಕೊಂಡಿದ್ದ. ನಕಲಿ ನೋಟು ಹಾಗೂ ನಿಷೇಧಿತ ನೋಟುಗಳನ್ನ ವರ್ಗಾವಣೆ ಮಾಡಲೆಂದೇ ಪ್ರತ್ಯೇಕ ತಂಡ ಕಟ್ಟಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದುಡ್ದಿನ ಮೂಟೆ ನೋಡುವುದಕ್ಕೆ ಕೊಡಬೇಕಿತ್ತು ಲಕ್ಷ ಲಕ್ಷ ಹಣ:ನಿಷೇಧಿತವಾದ 1000 ಹಾಗೂ 500 ಮುಖಬೆಲೆಯ ಹಳೆ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ನೀಡಿದರೆ ಹೊಸ ಕರೆನ್ಸಿ ಪಡೆಯಬಹುದು ಎಂದು ಆರೋಪಿಗಳು ಯಾಮಾರಿಸುತ್ತಿದ್ದರು. ದುಡ್ಡಿನ ರಾಶಿ ಶೇಖರಿಸುವ ಜಾಗ ನೋಡುವುದಕ್ಕಾಗಿಯೇ 2 ರಿಂದ 5 ಲಕ್ಷ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.