ಬೆಂಗಳೂರು: ಕಳ್ಳತನ ಪ್ರಕರಣಗಳ ಕುರಿತು ಮಾಲೀಕರು ಪೊಲೀಸರಿಗೆ ದೂರು ನೀಡುವುದು ಸಹಜ. ಆದರೆ, ಇಲ್ಲೊಂದು ವಿಭಿನ್ನ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಮಾಡಿ ಹಣ ದರೋಡೆ ಮಾಡಿದ ಪ್ರಕರಣದ ಆರೋಪಿಗಳನ್ನ ಬಂಧಿಸಿ, ದೋಚಿದ್ದ ಕೋಟಿಗಟ್ಟಲೇ ಸಂಪತ್ತನ್ನು ಪೊಲೀಸರು ಜಪ್ತಿ ಮಾಡಿಕೊಂಡರೂ ಮೃತನ ಕುಟುಂಬಸ್ಥರು ಕಳವು ಆಗಿದ್ದ ನಗ-ನಾಣ್ಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ದಾಖಲೆ ನೀಡಿಲ್ಲ. ಆಶ್ಚರ್ಯವೆಂದ್ರೆ, ಇದುವರೆಗೂ ಕಳ್ಳತನವಾಗಿರುವ ಹಣ ಹಾಗೂ ಚಿನ್ನಾಭರಣ ಎಷ್ಟು ಎಂಬುದು ಗೊತ್ತೇ ಇಲ್ಲ ಎನ್ನುತ್ತಿದ್ದಾರೆ ಮನೆ ಮಾಲೀಕರು.
ಚಾಮರಾಜಪೇಟೆಯ ಟೆಂಪಲ್ ಸ್ಟ್ರೀಟ್ ನಿವಾಸಿಯಾಗಿದ್ದ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜುಗ್ಗುರಾಜ್ ಜೈನ್ ನನ್ನು ಮೇ 24 ರಂದು ಕೆಲಸ ಮಾಡುತ್ತಿದ್ದ ಪ್ರಮುಖ ಆರೋಪಿ ರಾಜಸ್ಥಾನ ಮೂಲದ ಬಿಜಾರಾಮ್, ಕಣ್ಣಿಗೆ ಖಾರದಪುಡಿ ಎರಚಿ ಕೈಕಾಲು ಕಟ್ಟಿ ಹತ್ಯೆ ಮಾಡಿ ಕೋಟ್ಯಂತರ ರೂಪಾಯಿ ನಗ-ನಾಣ್ಯ ದೋಚಿದ್ದ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪಶ್ಚಿಮ ವಿಭಾಗದ ಪೊಲೀಸರು, ಗುಜರಾತ್ ಪೊಲೀಸರ ಸಹಕಾರದೊಂದಿಗೆ ಬಿಜಾರಾಮ್ ಹಾಗೂ ಆತನ ಸಹಚರನನ್ನು ಬಂಧಿಸಿ 4,93 ಕೋಟಿ ಮೌಲ್ಯದ 8 ಕೆ.ಜಿ 752 ಗ್ರಾಂ ಚಿನ್ನ, 3 ಕೆ.ಜಿ.870 ಗ್ರಾಂ ಬೆಳ್ಳಿ, ಹಾಗೂ 53 ಲಕ್ಷ ನಗದು ಜಪ್ತಿ ಮಾಡಿಕೊಂಡಿದ್ದರು.
ಲೆಕ್ಕ ಕೊಡದ ಮೃತನ ಕುಟುಂಬಸ್ಥರು:ದೀಪಂ ಎಲೆಕ್ಟ್ರಿಕಲ್ ಮಾಲೀಕನಾಗಿದ್ದ ಜುಗ್ಗುರಾಜ್, ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದರು. ಜೊತೆಗೆ ಬೇರೆ ಬೇರೆ ಮೂಲಗಳಿಂದ ಆದಾಯವಿತ್ತು. ಹಣಕಾಸಿನ ವ್ಯವಹಾರದ ಬಗ್ಗೆ ಮಕ್ಕಳ ಹತ್ತಿರ ಹೇಳಿಕೊಂಡಿರಲಿಲ್ಲ ಎನ್ನಲಾಗುತ್ತಿದೆ. ಜಗ್ಗುರಾಜ್ ಕೊಲೆಯಾಗುವ ಮುನ್ನ ಮಗ ಸಹ ಕೆಲಸದ ನಿಮಿತ್ತ ಹೊರ ರಾಜ್ಯಕ್ಕೆ ತೆರಳಿದ್ದರು.
ಕೊಲೆ ಬಳಿಕ ಪ್ರಮುಖ ಆರೋಪಿ ಲಪಾಟಾಯಿಸಿದ್ದ ಸಂಪತ್ತಿನ ಪೈಕಿ 5 ಕೋಟಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿಕೊಂಡಿದ್ದರು. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಳಿ ಸಹ ಕೋಟ್ಯಂತರ ಮೌಲ್ಯದ ಚಿನ್ನಾಭರಣವಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮತ್ತೊಬ್ಬ ಆರೋಪಿ ಪತ್ತೆಗಾಗಿ ಚಾಮರಾಜಪೇಟೆ ಪೊಲೀಸರು ರಾಜಸ್ಥಾನದಲ್ಲಿ ಬೀಡುಬಿಟ್ಟಿದ್ದಾರೆ.