ಬೆಂಗಳೂರು:ಖಾಸಗಿ ಫೈನಾನ್ಸ್ ಕಂಪನಿ ಉದ್ಯೋಗಿಯಾದ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಯುವಕನ ಶೋಧ ನಡೆಸುತ್ತಿರುವ ಪೊಲೀಸರು ಇಂದು ಆತನ ಪಾಲಕರನ್ನು ಪತ್ತೆ ಮಾಡಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇಲ್ಲಿನ ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ 23 ವರ್ಷದ ಯುವತಿಯ ಮೇಲೆ 2 ದಿನಗಳ ಹಿಂದೆ ನಾಗೇಶ್ ಆ್ಯಸಿಡ್ ದಾಳಿ ನಡೆಸಿದ್ದ. ಘಟನೆ ನಂತರ ತಲೆಮರೆಸಿಕೊಂಡಿರುವ ಆತನ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಈ ಮಧ್ಯೆಯೇ ಪಾಲಕರಿಗೆ ಕರೆ ಮಾಡಿದ್ದ ನಾಗೇಶ್ ಮನೆಯಿಂದ ಹೊರಟು ಹೋಗುವಂತೆ ತಿಳಿಸಿದ್ದ ಎನ್ನಲಾಗ್ತಿದೆ.
ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿ ನಾಗೇಶ್ನ ಸಹೋದರ ರಮೇಶ್ ಬಾಬು ಹಾಗೂ ತಂದೆ- ತಾಯಿಯನ್ನು ಬೆಂಗಳೂರಿನ ಮಾಗಡಿಯಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ನಾಗೇಶ್ ನಡವಳಿಕೆ ಹಾಗೂ ಈ ಕೃತ್ಯದ ಹಿಂದಿನ ವಿವರವನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಕುಟುಂಬಸ್ಥರನ್ನು ಅಜ್ಞಾತ ಸ್ಥಳದಲ್ಲಿರಿಸಿರುವ ಪೊಲೀಸರು, ಇವರ ಮೂಲಕ ನಾಗೇಶ್ ಪತ್ತೆಗೆ ಬಲೆ ಬೀಸಿದ್ದಾರೆ.