ಬೆಂಗಳೂರು: ಮೆಟ್ರೋ ಕಾಮಗಾರಿ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಸುತ್ತಿರುವುದನ್ನು ತಡೆದ ಸಂಬಂಧ ಆಡುಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಪ್ರಶಾಂತ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪರ್ಜನ್ಯ ವೃಕ್ಷರಕ್ಷ ತಂಡದ ಗಣೇಶ್ ಎನ್ನುವವರು ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ಆರೋಪಿಸಿದ್ದಾರೆ.
ಆಡುಗೋಡಿಯಿಂದ ಬನ್ನೇರುಘಟ್ಟದವರೆಗೆ ಬಿಎಂಆರ್‌ಸಿಎಲ್ ಮೆಟ್ರೋ ಕಾಮಗಾರಿ ನಡೆಸುತ್ತಿದ್ದು, 206 ಮರಗಳನ್ನು ಕಡಿಯಲು ಮುಂದಾಗಿದೆ. ಇದನ್ನು ಗಮನಿಸಿ ಗಣೇಶ್ ಎನ್ನುವವರು ಮರ ಕಡಿಯುವುದರ ಬಗ್ಗೆ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಮೆಟ್ರೋ ಅಧಿಕಾರಿಗಳು ಆದೇಶ ಪ್ರತಿ ತೋರಿಸಿದ್ದರು.
ಅಸಲಿಗೆ ಮೆಟ್ರೋ ಅಧಿಕಾರಿಗಳಿಗೆ ಮರಗಳನ್ನು ಕಡಿಯಲು ಅವಕಾಶವಿಲ್ಲ. ತೋಟಗಾರಿಕೆ ಇಲಾಖೆ ಈ ಕೆಲಸವನ್ನು ಮಾಡಬೇಕು ಮತ್ತು 206 ಮರಗಳ ಪೈಕಿ 50 ಮರಗಳನ್ನು ಬೇರೆಡೆ ಶಿಫ್ಟ್ ಮಾಡಬೇಕು ಮತ್ತು 156 ಮರಗಳ ಕಟಾವು ಮಾಡಬೇಕು ಎಂದು ಸೂಚಿಸಿದ್ದರು. ಆದರೂ ಅಕ್ರಮವಾಗಿ ಮರಗಳನ್ನು ಕಡಿಯುತ್ತಿದ್ದಾರೆಂದು ಆರೋಪಿಸಿ ಗಣೇಶ್ ತಡೆಯೊಡ್ಡಿದ್ದಾರೆ. ಇದರಿಂದ ಮೆಟ್ರೋ ಅಧಿಕಾರಿಗಳು ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.