ಬೆಂಗಳೂರು: ಕಳೆದ ಎರಡು ವರ್ಷಗಳಿಗೆ ಹೋಲಿಸಿಕೊಂಡರೆ 2021ರಲ್ಲಿ ನಗರದಲ್ಲಿ ಅಪರಾಧ ಪ್ರಕರಣ ಕಡಿಮೆಯಾಗಿವೆ. ಈಗಾಗಲೇ ಹೆಚ್ಚಿನ ಪ್ರಕರಣಗಳ ತನಿಖೆ ನಡೆದಿವೆ. ಬಾಕಿ ಉಳಿದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತಿಳಿಸಿದರು.
ನಗರದಲ್ಲಿ ಕಳೆದ ವರ್ಷ ನಡೆದ ಅಪರಾಧ ಪ್ರಕರಣಗಳ ಪರಾಮರ್ಶೆ ನಡೆಸಿ ಮಾತನಾಡಿದರು. 2021ರಲ್ಲಿ ಕಹಿ ಘಟನೆಗಳು ಸಂಭವಿಸಿವೆ. ಮುಖ್ಯವಾಗಿ ನಟ ಪುನೀತ್ ರಾಜ್ಕುಮಾರ್ ನಿಧನದ ವೇಳೆ ಪೊಲೀಸರ ಬಂದೋಬಸ್ತ್ ಕಾರ್ಯ ಶಾಘ್ಲನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆ ಕಾರ್ಯಾಚರಣೆ :ಕಳೆದ ವರ್ಷ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಕೊಲೆ, ಸರಗಳ್ಳತನ, ರಾಬರಿ, ಅತ್ಯಾಚಾರ ಸೇರಿದಂತೆ ಕ್ರೈಂ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ಸೈಬರ್ ಕ್ರೈಂ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಾಗಿದೆ. ಡ್ರಗ್ಸ್ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ರೌಡಿಸಂ ಮಟ್ಟ ಹಾಕಲಾಗಿದೆ ಎಂದರು.
ಕೊಲೆ ಪ್ರಕರಣಗಳ ಇಳಿಕೆ :2020ಕ್ಕೆ ಹೋಲಿಸಿದರೆ 2021ರಲ್ಲಿ ಕೊಲೆ ಪ್ರಕರಣಗಳು ಕಡಿಮೆಯಾಗಿವೆ. ಎರಡು ಕೊಲೆ ಪ್ರಕರಣ ಹೊರತುಪಡಿಸಿ ಉಳಿದ ಎಲ್ಲಾ ಹತ್ಯೆ ಪ್ರಕರಣಗಳನ್ನು ಭೇದಿಸಲಾಗಿದೆ. 156 ಕೊಲೆ ಪ್ರಕರಣಗಳಲ್ಲಿ 12 ಮಂದಿ ರೌಡಿಗಳು ಕೊಲೆಯಾಗಿರುವುದು ಕಂಡು ಬಂದಿದೆ. 152 ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದು, 145 ಪ್ರಕರಣ ಭೇದಿಸಲಾಗಿದೆ. ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಕೊಂಚ ಹಿನ್ನೆಡೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿಕೊಂಡರೆ ರಾಬರಿ ಪ್ರಕರಣಗಳು ಸಹ ಕಡಿಮೆಯಾಗಿವೆ.
ಮಹಿಳೆಯರಿಗೆ ಬೆಂಗಳೂರು ಸುರಕ್ಷಿತ :2021ರಲ್ಲಿ ನಾಪತ್ತೆ ಪ್ರಕರಗಳು ಕೊಂಚ ಮಟ್ಟಿಗೆ ಕಡಿಮೆಯಾಗಿವೆ. ದಾಖಲಾದ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ನಾಪತ್ತೆಯಾಗಿದ್ದಾರೆ. 145 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮನೆಯವರಿಂದಲೇ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ. ಪ್ರಕರಣದಲ್ಲಿ ಭಾಗಿಯಾದ ಎಲ್ಲ ತಪ್ಪಿತಸ್ಥರನ್ನು ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಬೆಂಗಳೂರು ಸುರಕ್ಷಿತ ಪ್ರದೇಶವಾಗಿದೆ. ಮಹಿಳೆಯರು ಆತಂಕ ಪಡುವ ಅಗತ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.