ಬೆಂಗಳೂರು :ನಗರದಲ್ಲಿ ಇಂದು ರಾತ್ರಿ 10 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಅನಗತ್ಯ ಓಡಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪರಿಷ್ಕೃತ ಆದೇಶದ ಪ್ರಕಾರ ಇಂದು 10 ಗಂಟೆಯಿಂದ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದೆ. ಸರ್ಕಾರದ ಆದೇಶವನ್ನು ಎಲ್ಲರೂ ಗೌರವಿಸಬೇಕು. ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಅನಗತ್ಯ ಓಡಾಡುವುದು ಸರಿಯಲ್ಲ. ಹೋಟೆಲ್ಗಳಲ್ಲಿ ಹೋಗಿ ಪಾರ್ಸೆಲ್ ತೆಗೆದುಕೊಳ್ಳಬಹುದು ಎಂದರು.
ವಾಣಿಜ್ಯ ಮಳಿಗೆ ಮಾಲೀಕರು ನಿಯಮ ಉಲ್ಲಂಘಿಸುವುದು ಕಂಡು ಬಂದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ತುರ್ತು ಪ್ರಯಾಣ ಹಾಗೂ ಅನುಮತಿ ನೀಡಲಾಗಿರುವ ಸೇವೆ ಹೊರತುಪಡಿಸಿದರೆ ಬೇರೆ ಯಾವ ವಾಹನಗಳು ಸುಖಾಸುಮ್ಮನೆ ಓಡಾಡುವುದು ಕಂಡು ಬಂದರೆ, ವಾಹನಗಳನ್ನು ಜಪ್ತಿ ಮಾಡುತ್ತೇವೆ. ನಗರದ ಆಯಾ ವಿಭಾಗದ ಪೊಲೀಸರು ಆಯ್ದ ಕಡೆಗಳಲ್ಲಿ ನಾಕಾಬಂದಿ ಹಾಕಿ ಪೊಲೀಸರು ತಪಾಸಣೆ ಮಾಡಲಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.