ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣದ ಸಲುವಾಗಿ ರಾಜ್ಯ ಸರ್ಕಾರ ಪ್ರತಿ ಭಾನುವಾರ ಲಾಕ್ಡೌನ್ ಜಾರಿ ಮಾಡಿ ಆದೇಶ ನೀಡಿದ ಬೆನ್ನಲ್ಲೇ ಇಂದು ರಾತ್ರಿ 8 ಗಂಟೆಯಿಂದಲೇ ಸಿಲಿಕಾನ್ ಸಿಟಿ ಸ್ತಬ್ಥ ಮಾಡಲು ನಗರ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
ಲಾಕ್ಡೌನ್ ಜಾರಿ ಬಗ್ಗೆ ಟ್ವೀಟ್ ಮಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೆಂಗಳೂರು ನಾಗರಿಕರೇ ಇಂದು ರಾತ್ರಿ 8 ಗಂಟೆಯಿಂದಲೇ ಲಾಕ್ಡೌನ್ ಆರಂಭವಾಗಿ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತಾಯವಾಗಲಿದೆ. ಗೌರವಾನ್ವಿತ ನಾಗರಿಕರೇ ಮನೆಯಲ್ಲೇ ಇರಿ. ಎಲ್ಲರ ಹಿತದೃಷ್ಟಿಯಿಂದ ಲಾಕ್ಡೌನ್ ಮಾಡುತ್ತಿರುವುದರಿಂದ ಅನಗತ್ಯ ವಿನಾಯಿತಿ ಕೇಳಬೇಡಿ. ಒಂದು ದಿನ ಮುಂದೂಡಿದರೆ ಯಾವುದೇ ನಷ್ಟವಾಗುವುದಿಲ್ಲ. ದಯವಿಟ್ಟು ಮನೆಯಲ್ಲಿ ಇರಿ, ವ್ಯಾಯಾಮ ಮಾಡಿ. ಶಿಸ್ತಿನಿಂದ ವರ್ತಿಸಿ ಸಹಕಾರ ನೀಡಿ ಎಂದು ಕೋರಿದ್ದಾರೆ.