ಬೆಂಗಳೂರು: ಮ್ಯಾಜಿಸ್ಟ್ರೇಟ್ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಿ ತನಿಖೆ ನಡೆಸಲು ಆದೇಶಿಸಿದ ನಂತರ ಪೊಲೀಸರು ಯಾವುದೇ ಕಾರಣಕ್ಕೂ ತನಿಖೆ ನಿರಾಕರಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮ್ಯಾಜಿಸ್ಟ್ರೇಟ್ ಆದೇಶದ ಹೊರತಾಗಿಯೂ ತನಿಖೆಗೆ ನಿರಾಕರಿಸಿದ್ದ ಪೊಲೀಸರ ಕ್ರಮ ಪ್ರಶ್ನಿಸಿ ಬೆಂಗಳೂರಿನ ಅಶ್ವಿನಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಸಿಆರ್‌ಪಿಸಿ ಸೆಕ್ಷನ್ 200ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ದೂರನ್ನು ಪರಿಗಣಿಸಿ ತನಿಖೆಗೆ ಆದೇಶಿಸಿದ ನಂತರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 173ಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಅಥವಾ ಕೋರ್ಟ್ ಆದೇಶವನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಜುಲೈ 14ರಂದು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ. ಹಾಗೆಯೇ, ತನಿಖೆ ನಡೆಸಲು ನಿರಾಕರಿಸಿ ಜ್ಞಾನಭಾರತಿ ಠಾಣೆ ಪೊಲೀಸರು 2021ರ ಆಗಸ್ಟ್ 26ರಂದು ನೀಡಿದ್ದ ಹಿಂಬರಹವನ್ನು ರದ್ದುಗೊಳಿಸಿದೆ.