ಬೆಂಗಳೂರು: ನಗರದಲ್ಲಿ 80 ಸಾವಿರ ಬೀದಿಬದಿ ವ್ಯಾಪಾರಿಗಳಿದ್ದರೂ ಸಮೀಕ್ಷೆಯಲ್ಲಿ 4 ಸಾವಿರ ಮಂದಿಯನ್ನು ಮಾತ್ರ ಗುರುತಿಸಲಾಗಿದೆ. ಹೀಗಾಗಿ, ಗುರುತಿನ ಚೀಟಿ ನೀಡುವ ಕಾರ್ಯ ಸಂಪೂರ್ಣವಾಗಿಲ್ಲ. ಟೌನ್ ವೆಂಡಿಂಗ್ ಕಮಿಟಿ ಮತ್ತಷ್ಟು ಸದೃಢಪಡಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಟೌನ್ಹಾಲ್ನಲ್ಲಿ ನಡೆದ ಬೀದಿಬದಿ ವ್ಯಾಪಾರಿಗಳ ರಾಷ್ಟ್ರೀಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ನಗರದ ಎಂಟೂ ವಲಯದಲ್ಲಿ ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಿಕೊಡಲಾಗುವುದು. ಅಲ್ಲದೇ ಪೊಲೀಸ್ ಅಧಿಕಾರಿಗಳಿಂದಾಗಲಿ, ಬಿಬಿಎಂಪಿ ನೌಕರರಿಂದಾಗಲೀ ಕಿರುಕುಳ ಆಗದಂತೆ ತಡೆಯಲಾಗುವುದು ಎಂದು ಭರವಸೆ ನೀಡಿದರು.