ಬೆಂಗಳೂರು: ತಡರಾತ್ರಿಯವರೆಗೂ ಮುಂದುವರಿದ ವಿಧಾನ ಪರಿಷತ್ ಕಲಾಪದಲ್ಲಿ ವಿವಿಧ ಪ್ರಮುಖ ವಿದೇಯಕಗಳು ಅನುಮೋದನೆಗೊಂಡವು.
ಕರ್ನಾಟಕ ಪಟ್ಟಣ ಹಾಗೂ ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆ ತಿದ್ದುಪಡಿ ವಿಧೇಯಕ, ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ ವಿಧೇಯಕ ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ ವಿಧಾನ ಪರಿಷತ್ನಲ್ಲಿ ಅಂಗೀಕಾರವಾದವು.
ಪೊಲೀಸ್ ತಿದ್ದುಪಡಿ ವಿಧೇಯಕ ಕೂಡ ಅಂಗೀಕಾರವಾಗಿದ್ದು, ಸುದೀರ್ಘ ಚರ್ಚೆಗೆ ಪಾತ್ರವಾಯಿತು. ಪರಿಷತ್ ಬಿಜೆಪಿ ಸದಸ್ಯ ಪುಟ್ಟಣ್ಣ ಮಾತನಾಡಿ, ಆನ್ಲೈನ್ ಜೂಜು ನಿಯಂತ್ರಣ ವಿಧೇಯಕದಲ್ಲಿ ಕುದುರೆ ರೇಸ್ ಸೇರಿಸಲಿ. ಆದ್ರೆ ಬಾಜಿ ಕಟ್ಟೋದು ಬೇಡ. ಇದ್ರಿಂದ ಸಾಕಷ್ಟು ಕೂಲಿ ಕಾರ್ಮಿಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಇದ್ರ ಜೊತೆಗೆ ಐಪಿಎಲ್ ಸಹ ಬ್ಯಾನ್ ಮಾಡಿ. ಐಪಿಎಲ್ನಿಂದ ಬಹಳಷ್ಟು ಯುವಕರು ಹಾಳಾಗುತ್ತಿದ್ದಾರೆ. ಒಂದೊಂದು ರನ್ಗೆ ಹಣ ಕಟ್ಟುತ್ತಿದ್ದಾರೆ. ಇದ್ರಿಂದ ವಿಧೇಯಕದಲ್ಲಿ ಐಪಿಎಲ್ ತಂದು ಬ್ಯಾನ್ ಮಾಡಿ ಎಂದರು.
ನಾನು ಈ ವಿಧೇಯಕಕ್ಕೆ ಬೆಂಬಲ ಸೂಚಿಸುತ್ತೇನೆ ಎಂದ ಲಕ್ಷ್ಮಣ್ ಸವದಿ, ಆದ್ರೆ ನಮ್ಮ ಪೊಲೀಸರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಟ್ಟಿದ್ದೀರಾ? ಪ್ರತಿಯೊಂದು ಗ್ರಾಮದಲ್ಲಿ ಆಡುವ ಜೂಜಾಟದ ಹಿಂದೆ ರಾಜಕಾರಣಿಗಳಿದ್ದಾರೆ. ಜೂಜಾಟದ ಮಾಹಿತಿ ತಿಳಿದು ಪೊಲೀಸರು ಹೋಗ್ತಾರೆ. ಆದ್ರೆ ಅವರನ್ನು ಅರೆಸ್ಟ್ ಮಾಡುವುಷ್ಟರಲ್ಲಿ ರಾಜಕಾರಣಿಗಳು ಕರೆ ಮಾಡ್ತಾರೆ. ನಾನು ಯಾರು ಗೊತ್ತಾ ಅಂತ ಕೇಳ್ತಾರೆ. ಅವ್ರನ್ನ ಬಿಡಲಿಲ್ಲ ಅಂದ್ರೆ ನೀನು ಏನ್ ಆಗ್ತೀಯಾ ಗೊತ್ತಾ ಅಂತ ಕೇಳ್ತಾರೆ. ಪೋಲೀಸರಿಗೆ ಪೂರ್ಣವಾಗಿ ಸ್ವತಂತ್ರ ಕೊಟ್ಟಾಗ ಮಾತ್ರ ಈ ವಿಧೇಯಕಕ್ಕೆ ಸಾರ್ಥಕ ಎಂದರು.
ಪೊಲೀಸ್ ತಿದ್ದುಪಡಿ ವಿದೇಯಕ ವಿಚಾರ ಮಾತನಾಡಿದ ಶ್ರೀನಿವಾಸ್ ಮಾನೆ, ಹಳ್ಳಿಗಳಲ್ಲಿ ಎರಡು, ಮೂರು ಸಾವಿರ ಜೂಜು ಆಡ್ತಾರೆ. ಪೊಲೀಸರು ಅವ್ರನ್ನ ಅರೆಸ್ಟ್ ಮಾಡ್ತಾರೆ. ಯಾರೇ ಹೇಳಿದ್ರು ಫೈನ್ ಹಾಕ್ತಾರೆ. ಹತ್ತು ಸಾವಿರ, ಹದಿನೈದು ಸಾವಿರ ಫೈನ್ ಹಾಕ್ತಾರೆ. ಲೋಕಲ್ನಲ್ಲೇ ಬಹಳ ರಾಜಕಾರಣ ಇದೆ. ಅರೆಸ್ಟ್ ಆದ ಮೇಲೆ ಕೇಸ್ ಹಾಕದೇ, ರಾಜಕಾರಣಿಗಳ ಒತ್ತಡಕ್ಕೆ ಅವರನ್ನ ಬಿಟ್ಟರೆ, ಆ ಅಧಿಕಾರಿಗಳ ಮೇಲೆ ಕ್ರಮವಹಿಸಬೇಕು ಎಂದರು.
ಜೆಡಿಎಸ್ ಸದಸ್ಯ ಭೋಜೇಗೌಡ ಮಾತನಾಡಿ, ಇಸ್ಪೀಟ್ ಆಟ ಆಡೋಕೇ ಪೊಲೀಸರು ಅನುಮತಿ ಕೊಡ್ತಾರೆ. ನಂಬರ್ಸ್ ಮೇಲೆ ಬೆಟ್ಟಿಂಗ್ ಕಟ್ತಾರೆ ಎಂದರು. ಈ ಮಧ್ಯೆ ಮಧ್ಯಪ್ರವೇಶಿಸಿದ ಭಾರತಿ ಶೆಟ್ಟಿ, ನಾವೇನು ಇಲ್ಲಿ ಇಸ್ಪೀಟ್ ಕಲಿಯೋಕೇ ಬಂದಿದ್ದೀವಾ? ಸಾಕು ನಿಲ್ಲಿಸಿ ಮನೆಗೆ ಹೋಗ್ಬೇಕು ಎಂದರು.