ಕರ್ನಾಟಕ

karnataka

ETV Bharat / city

ವಿದೇಶದಿಂದ 2 ಲಕ್ಷ ರೆಮ್ಡೆಸಿವಿರ್ ಖರೀದಿಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ: ಸಚಿವ ಸುಧಾಕರ್ - ಕರ್ನಾಟಕದಲ್ಲಿ ರೆಮ್ ಡಿಸಿವಿರ್ ಕೊರತೆ

ಲಂಡನ್, ಯುಕೆಯಲ್ಲಿ ಮನೆಯಲ್ಲೆ ಕುಳಿತು ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ. ನಮ್ಮಲ್ಲೂ ಟೆಲಿ ಮೆಡಿಸಿನ್​​ನಿಂದ ಮನೆಯಲ್ಲೆ ಚಿಕಿತ್ಸೆ ಪಡೆಯಬಹುದು. ಕೊರೊನಾ ಬಂದ ಮಾತ್ರಕ್ಕೆ ಎಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಿಲ್ಲ, ಯಾರಿಗೋ ಆಕ್ಸಿಜನ್ ಸಮಸ್ಯೆಯಾದರೆ ಅದನ್ನು ನೋಡಿ ಆತಂಕಗೊಂಡು ನಮಗೂ ಆಕ್ಸಿಜನ್ ಕೊಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಹೆದರಿಕೆಯಿಂದ ಈ ರೀತಿಯ ಸಮಸ್ಯೆ ಆಗುತ್ತಿದೆ ಎಂದು ಸಚಿವರು ತಿಳಿಸಿದರು.

ಸಚಿವ ಸುಧಾಕರ್
ಸಚಿವ ಸುಧಾಕರ್

By

Published : Apr 23, 2021, 4:33 PM IST


ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆಗೆ ಅತಿ ಅಗತ್ಯವಾಗಿ ಬೇಕಿರುವ ರೆಮ್ಡೆಸಿವಿರ್ ಅನ್ನು ವಿದೇಶದಿಂದ ತರಿಸಿಕೊಳ್ಳಲು ಕೇಂದ್ರದ ಅನುಮತಿ ಕೋರಿದ್ದೇವೆ. ಅನುಮತಿ ಸಿಕ್ಕಲ್ಲಿ 2 ಲಕ್ಷ ರೆಮ್ಡೆಸಿವಿರ್ ವಯಲ್ ಅನ್ನು ಏರ್ ಲಿಫ್ಟ್ ಮೂಲಕ ತರಿಸಿಕೊಳ್ಳಲಾಗುತ್ತದೆ‌ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಮ್ಡೆಸಿವಿರ್ ಕೊರತೆಯಾಗದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ, ಆದರೂ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯು ಕೊರೊನಾ ರೋಗಿಗಳಿಗೆ ನೀಡಲು ರೆಮ್ಡೆಸಿವಿರ್​ ಕೊರತೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದರು. ಈಗ 10-15 ಸಾವಿರ ಸಪ್ಲೈ ಬರುತ್ತಿದೆ. ಸದಾನಂದಗೌಡರು ಇನ್ನು 25 ಸಾವಿರ ವಯಲ್ ಖರೀದಿಸಲು ಸಹಕಾರ ನೀಡಿದ್ದಾರೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜುಂದಾರ್ ಷಾ ಅವರು ಸದ್ಯಕ್ಕೆ 5 ಸಾವಿರ ವಯಲ್ ಕೊಡುತ್ತೇವೆ ಎಂದು ಹೇಳಿದ್ದಾರೆ, ಇಷ್ಟೆಲ್ಲದರ ಜೊತೆ ಅಗತ್ಯ ಬಿದ್ದರೆ ವಿದೇಶದಿಂದ ಆಮದು ಮಾಡಿಕೊಳ್ಳಲೂ ಚಿಂತನೆ ನಡೆಸಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತಿದೆ. ವಿದೇಶದಿಂದ ಖರೀದಿಗೆ ಅನುಮತಿ ಸಿಕ್ಕಲ್ಲಿ 2 ಲಕ್ಷ ರೆಮ್ಡೆಸಿವಿರ್​ ವಯಲ್ ಏರ್ ಲಿಫ್ಟ್ ಮೂಲಕ ತರುತ್ತೇವೆ ಎಂದರು.

ಲಂಡನ್, ಯುಕೆಯಲ್ಲಿ ಮನೆಯಲ್ಲೆ ಕುಳಿತು ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ. ನಮ್ಮಲ್ಲೂ ಟೆಲಿ ಮೆಡಿಸಿನ್​​ನಿಂದ ಮನೆಯಲ್ಲೆ ಚಿಕಿತ್ಸೆ ಪಡೆಯಬಹುದು. ಕೊರೊನಾ ಬಂದ ಮಾತ್ರಕ್ಕೆ ಎಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಿಲ್ಲ, ಯಾರಿಗೋ ಆಕ್ಸಿಜನ್ ಸಮಸ್ಯೆಯಾದರೆ ಅದನ್ನು ನೋಡಿ ಆತಂಕಗೊಂಡು ನಮಗೂ ಆಕ್ಸಿಜನ್ ಕೊಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಹೆದರಿಕೆಯಿಂದ ಈ ರೀತಿಯ ಸಮಸ್ಯೆ ಆಗುತ್ತಿದೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಡ. ತೀವ್ರ ರೋಗದ ಲಕ್ಷಣ ಇದ್ದವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ರೋಗ ಲಕ್ಷಣ ಇಲ್ಲದವರು ಮನೆಯಲ್ಲೇ ಹೋಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆದುಕೊಳ್ಳಬಹುದು, ಈ ಬಗ್ಗೆ ನಮ್ಮ ಸಹಾಯವಾಣಿಯ ಸಹಕಾರ ಪಡೆದುಕೊಳ್ಳಿ ಎಂದು ಸುಧಾಕರ್ ಸಲಹೆ ನೀಡಿದರು.

ಒಂದು ವಾರದಲ್ಲಿ 2000 ಐಸಿಯು ಬೆಡ್​ನ ಮೇಕ್​ಶಿಫ್ಟ್ ಆಸ್ಪತ್ರೆ:
ಬೆಂಗಳೂರಿನಲ್ಲಿ ಆಕ್ಸಿಜನ್, ಐಸಿಯು, ವೆಂಟಿಲೇಟರ್ ಬೆಡ್ ಸಮಸ್ಯೆ ಆಗುತ್ತಿದೆ. ಇನ್ನು ಒಂದು ವಾರದಲ್ಲಿ 2000 ಐಸಿಯು ಬೆಡ್​​ವುಳ್ಳ ಮೇಕ್​​ಶಿಫ್ಟ್​​ ಆಸ್ಪತ್ರೆ ಮಾಡುತ್ತೇವೆ. 2000 ಹಾಸಿಗೆಯಲ್ಲಿ 800 ರಿಂದ 1000 ವೆಂಟಿಲೇಟರ್ ಹಾಸಿಗೆ ವ್ಯವಸ್ಥೆ ಮಾಡುತ್ತೇವೆ. ನಮಗೆ 50 ರಿಂದ 80 ವೆಂಟಿಲೇಟರ್ ಕೊರತೆ ಇದೆ ಅದನ್ನು ಹೆಚ್ಚಿಸಿ ಎಂದು ಸಿಎಂ ಹೇಳಿದ್ದಾರೆ. ಈ ವಾರದಲ್ಲಿ ವಿಕ್ಟೋರಿಯೊ ಆವರಣದಲ್ಲಿ 500 ಹಾಸಿಗೆ ಹೆಚ್ಚಿಸುತ್ತೇವೆ ಎಂದರು.

ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚುತ್ತಿದೆ. ಈ ಬಗ್ಗೆ ಗೃಹ ಸಚಿವರು, ಕಂದಾಯ ಸಚಿವರ ಜೊತೆ ಮಾತಾಡುತ್ತೇನೆ. ಎಲ್ಲವನ್ನೂ ಆರೋಗ್ಯ ಇಲಾಖೆ ನೋಡಲು ಆಗಲ್ಲ, ಈ ಬಗ್ಗೆ ಸಂಬಂದಪಟ್ಟ ಸಚಿವರ ಜೊತೆ ಮಾತಾಡುತ್ತೇನೆ ಎಂದು ತಿಳಿಸಿದರು.

ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ, ಇದು ಕೇವಲ ರಾಜ್ಯಕ್ಕೆ ಮಾತ್ರವಲ್ಲ, ಎಲ್ಲಾ ರಾಜ್ಯದಲ್ಲೂ ಸಮಸ್ಯೆ ಇದೆ. ವೈದ್ಯಕೀಯ ಜಗತ್ತಿಗೆ ಇದು ಸವಾಲಾಗಿದೆ. ಈ ಸಂದರ್ಭದಲ್ಲಿ ವೈಯಕ್ತಿಕ ಆರೋಪ ಸರಿಯಲ್ಲ, ಎಲ್ಲರೂ ಸಹಕಾರ ನೀಡಬೇಕು. ಸಿಎಂ ಆಸ್ಪತ್ರೆಯಿಂದ ಬಂದ ತಕ್ಷಣ 400 ಕೋಟಿ ಲಸಿಕೆಗೆ ಮೀಸಲಿಟ್ಟಿದ್ದಾರೆ. ಲಸಿಕೆಯೊಂದೇ ಇದಕ್ಕೆ ಪರಿಹಾರ ಎಂದು ಸರ್ಕಾರದ ಕ್ರಮವನ್ನು ಸುಧಾಕರ್ ಸಮರ್ಥಿಸಿಕೊಂಡರು.

ಚಿಕಿತ್ಸೆ ದರ ಕಡಿತ, ಎಂ.ಬಿ ಪಾಟೀಲ್​​ಗೆ ಅಭಿನಂದನೆ:
ಮಾಜಿ ಸಚಿವ ಎಂ.ಬಿ.ಪಾಟೀಲ್ ತಮ್ಮ ಆಸ್ಪತ್ರೆಯಲ್ಲಿ ಕಡಿಮೆ ದರಕ್ಕೆ ಸೇವೆ ನೀಡಿ ಕೊರೊನಾ ಸಂಕಷ್ಟದ ಪರಿಸ್ಥಿತಿ ನಿಭಾಯಿಸಲು ಸಹಕಾರ ನೀಡಿದ್ದಾರೆ. ಇದೇ ರೀತಿ ಆಸ್ಪತ್ರೆಗಳು, ವೈದ್ಯಕೀಯ ಸಂಸ್ಥೆಗಳು ಜನರ ಸಂಕಷ್ಟಕ್ಕೆ ಮಿಡಿಯಬೇಕು ಎಂದು ಮನವಿ ಮಾಡಿದರು.

ವಿಜಯಪುರದ ಬಿಎಲ್​ಡಿಇ ಮೆಡಿಕಲ್ ಕಾಲೇಜಿನ ಮುಖ್ಯಸ್ಥರಾದ ಮಾಜಿ ಸಚಿವ ಎಂ.ಬಿ.ಪಾಟೀಲ್ ಕೊರೊನಾದಿಂದಾಗಿ ಬಾಧಿತರಾಗಿರುವ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ರಾಜ್ಯ ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳ ಶೇ.50 ರಷ್ಟು ಹಾಸಿಗೆಗಳನ್ನು ಕೋವಿಡ್​​ಗೆ ಮೀಸಲಿಡುವ ಕ್ರಮ ಜಾರಿಯಲ್ಲಿದೆ. ಆದರೆ, ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳನ್ನು ಅರಿತಿರುವ ಹಿರಿಯ ರಾಜಕಾರಣಿ ಎಂ.ಬಿ.ಪಾಟೀಲ್, ತಮ್ಮ ಆಸ್ಪತ್ರೆಯಲ್ಲಿ ಹಾಸಿಗೆಗಳ ದರವನ್ನು ಶೇ.70 ರಷ್ಟು ಕಡಿತಗೊಳಿಸಿದ್ದಾರೆ. ಜೊತೆಗೆ 500 ಹಾಸಿಗೆಗಳನ್ನು ಆರ್ಥಿಕವಾಗಿ ದುರ್ಬಲರಾದ ವರ್ಗಕ್ಕೆ ಮೀಸಲಿಟ್ಟಿದ್ದಾರೆ. ಈ ಜನಸ್ನೇಹಿ ಕ್ರಮ ಇಂತಹ ಕೋವಿಡ್ ಪರಿಸ್ಥಿತಿಗೆ ಬಹಳಷ್ಟು ನೆರವಾಗಿದೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಇನ್ನೂ ಅನೇಕರು ಈ ರೀತಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿದ್ದಾರೆ. ಡಾ.ಸಿ.ವಿ.ಮೋಹನ್ ಅವರು ಬೊಮ್ಮಸಂದ್ರದ ಚೇತನ ವಿಹಾರ ಎಲ್ಡರ್ ಕೇರ್ ಸೆಂಟರ್​​ನ 200 ಹಾಸಿಗೆಗಳನ್ನು ಸ್ವಯಂ ಪ್ರೇರಿತರಾಗಿ ಕೋವಿಡ್​ಗೆ ಮೀಸಲಿಟ್ಟಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ಕರೆಗೆ ಈ ರೀತಿ ತ್ವರಿತವಾಗಿ ಸ್ಪಂದಿಸಿರುವುದು ಶ್ಲಾಘನೀಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದಲ್ಲಿ ಕೋವಿಡ್​​ನಿಂದ ಚೇತರಿಸಿಕೊಂಡವರ ರಕ್ತದಿಂದ ಪ್ಲಾಸ್ಮಾ ತೆಗೆದು ಚಿಕಿತ್ಸೆಗೆ ಒದಗಿಸಿಕೊಡುವ ಅಭಿಯಾನ ಆರಂಭವಾಗಿದೆ. ಇದು ಕೋವಿಡ್​ನಿಂದ ತೀವ್ರವಾಗಿ ಬಳಲುತ್ತಿರುವ ರೋಗಿಗಳಿಗೆ ಸಂಜೀವಿನಿ ನೀಡುವ ಉತ್ತಮ ಕ್ರಮವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಒಗ್ಗಟ್ಟಿನ ಹೋರಾಟ ಬೇಕು:
ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗ ಅವಿರತವಾಗಿ ಶ್ರಮಿಸುತ್ತಿದೆ. ಯಾವುದೇ ಪಕ್ಷ, ಸಿದ್ಧಾಂತಗಳ ಭೇದವಿಲ್ಲದೆ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳು ಕೋವಿಡ್ ಹೋರಾಟದಲ್ಲಿ ಭಾಗಿಯಾಗಿರುವುದು ಒಗ್ಗಟ್ಟಿನ ಸಂಕೇತವಾಗಿದೆ. ಇಂತಹ ಒಗ್ಗಟ್ಟಿನ ಹೋರಾಟದಿಂದ ನಾವು ಕೊರೊನಾವನ್ನು ಮಣಿಸಬೇಕಿದೆ. ಇನ್ನೂ ಹೆಚ್ಚು ಸಂಘ, ಸಂಸ್ಥೆಗಳು ಮುಂದೆ ಬಂದು ತಮ್ಮ ವ್ಯಾಪ್ತಿಯಲ್ಲಿ ಕೊರೊನಾ ಸಾಂಕ್ರಾಮಿಕವನ್ನು ಹೊಡೆದೋಡಿಸಲು ನೆರವಾಗಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

ABOUT THE AUTHOR

...view details