ಬೆಂಗಳೂರು: ಬಯಸದೇ ಬಂದ ಭಾಗ್ಯದ ಮುಖ್ಯಮಂತ್ರಿಗಳೇ ನಮ್ಮ ಬೇಡಿಕೆ ಈಡೇರಿಸಿ ಎನ್ನುವ ಬ್ಯಾನರ್ ಹಿಡಿದು ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಪೈಲ್ವಾನರು ಮಾಸಾಶನ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಆರ್.ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ಪೈಲ್ವಾನರು ಬೊಮ್ಮಾಯಿ ಭೇಟಿಗಾಗಿ ಭಿತ್ತಿಪತ್ರಗಳನ್ನು ಹಿಡಿದು ಅವರ ನಿವಾಸದ ಎದುರು ಕಾದು ಕುಳಿತರು. ಉಪರಾಷ್ಟ್ರಪತಿಗಳನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿವಾಸದ ಬಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕುಂದುಕೊರತೆಗಳನ್ನು ಆಲಿಸಿದರು. ಈ ವೇಳೆ ಪೈಲ್ವಾನರ ಅಹವಾಲನ್ನೂ ಆಲಿಸಿದರು.