ಬೆಂಗಳೂರು: ಅಪರೂಪದ ಪಕ್ಷಿ ಸಂಕುಲವಾದ 'ಗ್ರೇಟ್ ಇಂಡಿಯನ್ ಬಸ್ಟರ್ಡ್'(ಜಿಐಬಿ) ಪಕ್ಷಿಗಳ ರಕ್ಷಣೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್, ಪಕ್ಷಿಗಳ ರಕ್ಷಣೆಗೆ ಕೈಗೊಳ್ಳಬಹುದಾದ ತುರ್ತು ಕ್ರಮಗಳ ವರದಿ ಸಲ್ಲಿಸುವಂತೆ ಸೂಚಿಸಿದೆ.
ಅಪರೂಪದ ಪಕ್ಷಿಗಳ ರಕ್ಷಣೆ ಕೋರಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಸಂವಿಧಾನದ ವಿಧಿ 48(ಎ) ಮತ್ತು 51 (ಎ) ಪ್ರಕಾರ ಅರಣ್ಯ ಹಾಗೂ ವನ್ಯಜೀವಿಗಳನ್ನು ರಕ್ಷಿಸುವುದು ಹಾಗೂ ಪೋಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅದರಂತೆ ರಾಜ್ಯ ಸರ್ಕಾರ ಪಕ್ಷಿಗಳ ಸಂರಕ್ಷಣೆಗೆ ಶೀಘ್ರವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ಬಳ್ಳಾರಿಯ ಪರಿಸರವಾದಿ ಎಡ್ವರ್ಡ್ ಸಂತೋಷ್ ಮಾರ್ಟಿನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಅಲ್ಲದೆ ಸಂವಿಧಾನದ ವಿಧಿ 48(ಎ) ಮತ್ತು 51 (ಎ) ಪ್ರಕಾರ ಅರಣ್ಯ ಹಾಗೂ ವನ್ಯಜೀವಿಗಳನ್ನು ರಕ್ಷಿಸುವುದು ಹಾಗೂ ಪೋಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅದರಂತೆ ರಾಜ್ಯ ಸರ್ಕಾರ ಪಕ್ಷಿಗಳ ಸಂರಕ್ಷಣೆಗೆ ಶೀಘ್ರವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.
ಅರ್ಜಿದಾರರ ಕೋರಿಕೆ: ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳು ದೇಶದಲ್ಲಿರುವ ಅತ್ಯಂತ ಅಪರೂಪದ ಪಕ್ಷಿ ಸಂಕುಲವಾಗಿದೆ. ಈ ಪಕ್ಷಿಗಳು ಪಶ್ಚಿಮಘಟ್ಟ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಮಾತ್ರ ಕಾಣಸಿಗುತ್ತವೆ. ರಾಜ್ಯದಲ್ಲಿ ಬಳ್ಳಾರಿಯ ಸಿರಗುಪ್ಪೆಯಲ್ಲೂ ಈ ಪಕ್ಷಿಗಳಿವೆ. ಈ ಪ್ರದೇಶದಲ್ಲಿ ಇತ್ತೀಚೆಗೆ ಜೆಎಸ್ಡಬ್ಲ್ಯೂ ಸಂಸ್ಥೆ 250 ಎಕರೆ ಭೂಮಿ ಖರೀದಿಸಿ ವಾಚ್ ಟವರ್ಗಳನ್ನು ನಿರ್ಮಿಸುತ್ತಿದೆ. ಇದು ತಳಹಂತದಲ್ಲಿ ಹಾರಾಡುವ ಪಕ್ಷಿಗಳಿಗೆ ಮಾರಕವಾಗಿ ಪರಿಣಿಮಿಸಿದೆ. ಆದ್ದರಿಂದ ಆ ಸ್ಥಳದಲ್ಲಿ ನಡೆಸುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಹಾಗೂ ವಾಚ್ ಟವರ್ಗಳನ್ನು ಕೂಡಲೇ ತೆರವು ಮಾಡುವಂತೆ ನಿರ್ದೇಶಿಸಬೇಕು. ಹುಲ್ಲುಗಾವಲು ಒತ್ತುವರಿಯನ್ನು ತೆರವು ಮಾಡುವಂತೆ ಹಾಗೂ ಪಕ್ಷಿಗಳ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಜರುಗಿಸುವಂತೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.