ಕರ್ನಾಟಕ

karnataka

ETV Bharat / city

ಮಂಗನ ಕಾಯಿಲೆ ನಿಯಂತ್ರಣ ಕೋರಿ ಪಿಐಎಲ್: ಅಗತ್ಯ ಕ್ರಮಕ್ಕೆ ಹೈಕೋರ್ಟ್ ಆದೇಶ

2020ರ ಜನವರಿಯಿಂದ ಮೇ ಅಂತ್ಯದವರೆಗೆ ರಾಜ್ಯದಲ್ಲಿ 15 ಮಂದಿ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕಾರವಾರಗಳಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ವ್ಯಾಪಿಸುತ್ತಿದೆ. ಆದರೆ ಕಾಯಿಲೆ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.

pil-seeking-monkey-flu-disease-control
ಮಂಗನ ಕಾಯಿಲೆ

By

Published : Feb 2, 2021, 8:46 PM IST

ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಮಾರಕ ರೋಗ ಮಂಗನ ಕಾಯಿಲೆ ಹರಡುವುದನ್ನು ತಡೆಯಲು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಶಿವಮೊಗ್ಗ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ನಿಯಂತ್ರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಶಿವಮೊಗ್ಗದ ವಕೀಲ ಕೆ.ಪಿ.ಶ್ರೀಪಾಲ್ ಹಾಗೂ ಎನ್.ಜಿ.ರಮೇಶಪ್ಪ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಶಿವಮೊಗ್ಗ ಜಿಲ್ಲಾ ವೈದ್ಯಾಧಿಕಾರಿಗಳು ಸಲ್ಲಿಸಿದ್ದ ಪ್ರಮಾಣಪತ್ರ ಪರಿಶೀಲಿಸಿದ ಪೀಠ, ಕಾಯಿಲೆ ನಿಯಂತ್ರಣಕ್ಕೆ ಹಾಗೂ ರೋಗಿಗಳ ಚಿಕಿತ್ಸೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ವೈದ್ಯಾಧಿಕಾರಿಗಳಾದ ಡಾ. ಶಂಕರಪ್ಪ ಹಾಗೂ ಡಾ. ಕಿರಣ್ ವರದಿಯಲ್ಲಿ, ರೋಗಿಗಳ ಚಿಕಿತ್ಸೆಗೆ 2.71 ಲಕ್ಷ ಚುಚ್ಚುಮದ್ದುಗಳನ್ನು ಪೂರೈಸಲಾಗಿದೆ. ಕಾಯಿಲೆ ನಿಯಂತ್ರಿಸಲು ಅರಣ್ಯ ಮತ್ತು ಆರೋಗ್ಯ ಇಲಾಖಾ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಲಾಗಿದೆ. ಸಾಕಷ್ಟು ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 2018ರಿಂದೀಚೆಗೆ ಜಿಲ್ಲೆಯಲ್ಲಿ ಕಾಯಿಲೆ ನಿಯಂತ್ರಣಕ್ಕೆ ಬಂದಿದೆ. ಜತೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿದಾರರು, 2020ರ ಜನವರಿಯಿಂದ ಮೇ ಅಂತ್ಯದವರೆಗೆ ರಾಜ್ಯದಲ್ಲಿ 15 ಮಂದಿ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕಾರವಾರಗಳಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ವ್ಯಾಪಿಸುತ್ತಿದೆ. ಆದರೆ ಕಾಯಿಲೆ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು.

ABOUT THE AUTHOR

...view details