ಕರ್ನಾಟಕ

karnataka

ಹೈಕೋರ್ಟ್ ನ್ಯಾಯಮೂರ್ತಿಗೆ ವರ್ಗಾವಣೆ ಬೆದರಿಕೆ ಪ್ರಕರಣ: ಎಸ್​​ಐಟಿ ತನಿಖೆ ಕೋರಿ ಪಿಐಎಲ್ ಸಲ್ಲಿಕೆ

By

Published : Jul 16, 2022, 6:35 AM IST

ಹೈಕೋರ್ಟ್ ನ್ಯಾಯಮೂರ್ತಿ ವರ್ಗಾವಣೆ ಬೆದರಿಕೆ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ಗೆ ವಿಶೇಷ ಮೇಲ್ಮನವಿ ಸಲ್ಲಿಸಿದೆ. ಈ ನಡುವೆ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡಾ ಸಲ್ಲಿಕೆಯಾಗಿದೆ.

Justice HP Sandesh and  high court
ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಹಾಗೂ ಹೈಕೋರ್ಟ್

ಬೆಂಗಳೂರು:ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರ ವಿರುದ್ಧ ಮಾಡಲಾದ ಕಟುವಾದ ಟೀಕೆ - ಟಿಪ್ಪಣಿಗಳ ಹಿನ್ನೆಲೆ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಅವರಿಗೆ ತೃತೀಯ ವ್ಯಕ್ತಿಯೊಬ್ಬರ ಮೂಲಕ ವರ್ಗಾವಣೆ ಬೆದರಿಕೆ ಹಾಕಿರುವ ಪ್ರಕರಣದ ಬಗ್ಗೆ ಎಸ್​​ಐಟಿ ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ಗೆ ಸಲ್ಲಿಸಲಾಗಿದೆ.

ತುಮಕೂರಿನ ನ್ಯಾಯವಾದಿ ರಮೇಶ್.ಎಲ್ ನಾಯಕ್ ಶುಕ್ರವಾರ ಈ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಇದು ಪಟ್ಟಿಯಾಗಿ ವಿಚಾರಣೆಗೆ ಬರಬೆಕಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ನ್ಯಾಯಮೂರ್ತಿಗಳಿಗೆ ವರ್ಗಾವಣೆ ಬೆದರಿಕೆಯೊಡ್ಡಿದ ಪ್ರಕರಣವನ್ನು ವಿಶೇಷ ತನಿಖಾ ತಂಡದ ತನಿಖೆಗೆ ವಹಿಸುವುದರ ಜೊತೆಗೆ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಅವರಿಗೆ ಸೂಕ್ತ ಭದ್ರತೆ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ:ಎಸಿಬಿ ಎಡಿಜಿಪಿ ವಿರುದ್ಧ ನ್ಯಾ.ಹೆಚ್‌.ಪಿ.ಸಂದೇಶ್‌ ಗರಂ: ವಿಚಾರಣೆ 3 ದಿನ ಮುಂದೂಡಲು ಸುಪ್ರೀಂ ಮನವಿ

ಅರ್ಜಿದಾರರ ಕೋರಿಕೆ ಏನು?:ನ್ಯಾಯಮೂರ್ತಿ ಹೆಚ್​​.ಪಿ ಸಂದೇಶ್ ಅವರಿಗೆ ವೈ, ವೈ ಪ್ಲಸ್‌, ಜಡ್, ಜಡ್ ಪ್ಲಸ್‌ ಅಥವಾ ಸೂಕ್ತ ಭದ್ರತೆ ಒದಗಿಸಲು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಈ ರೀತಿಯ ವರ್ಗಾವಣೆ ಬೆದರಿಕೆಗಳು ಬಂದಾಗ ನ್ಯಾಯಮೂರ್ತಿಗಳು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಅಡ್ಡಿಯಾಗುತ್ತವೆ. ಇದರಿಂದ, ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಿಸುವ ಹಾಗೂ ನ್ಯಾಯಾಂಗದ ಮೇಲಿನ ಜನರ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಭ್ರಷ್ಟಾಚಾರ ಪ್ರಕರಣವೊಂದರ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಅವರು ಪ್ರಕರಣದಲ್ಲಿ ಎಸಿಬಿಯು ಸಮರ್ಪಕವಾಗಿ ತನಿಖೆ ನಡೆಸಿಲ್ಲ ಎಂದು ಭ್ರಷ್ಟಾಚಾರ ನಿಗ್ರಹದಳ ಮತ್ತು ಎಸಿಬಿಯ ಮುಖ್ಯಸ್ಥರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಇದೇ ಕಾರಣಕ್ಕೆ ತಮಗೆ ಮೂರನೇ ವ್ಯಕ್ತಿ ಮೂಲಕ ವರ್ಗಾವಣೆಯ ಬೆದರಿಕೆ ಒಡ್ಡಲಾಗಿದೆ ಎನ್ನುವ ಸ್ಫೋಟಕ ಮಾಹಿತಿಯನ್ನ ನ್ಯಾಯಮೂರ್ತಿಗಳು ಹೈಕೋರ್ಟ್ ಕಾರ್ಯಕಲಾಪದಲ್ಲಿಯೇ ಬಹಿರಂಗಪಡಿಸಿದ್ದರು. ನಂತರ ವರ್ಗಾವಣೆ ಬೆದರಿಕೆಯ ಬಗ್ಗೆ ಇತ್ತೀಚೆಗೆ ಲಿಖಿತ ಆದೇಶದಲ್ಲಿ ದಾಖಲು ಮಾಡಿದ್ದರು.

ಇದನ್ನೂ ಓದಿ:'ವರ್ಗಾವಣೆ ಬೆದರಿಕೆಗೆ ಬಗ್ಗಲ್ಲ': ಹೈಕೋರ್ಟ್ ನ್ಯಾಯಮೂರ್ತಿ ಹೆಚ್‌.ಪಿ.ಸಂದೇಶ್ ದಿಟ್ಟ ನುಡಿ

ABOUT THE AUTHOR

...view details