ಬೆಂಗಳೂರು: ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ "ಕೇಂದ್ರ ವಲಯದ ಬಡ್ಡಿ ಸಹಾಯಧನ ಯೋಜನೆ"-2009 (ಸಿಎಸ್‍ಐಎಸ್) ರ ಸೌಲಭ್ಯಗಳನ್ನು ರಾಜ್ಯದ ಎಲ್ಲಾ ವಿಧ್ಯಾರ್ಥಿಗಳಿಗೆ ವಿಸ್ತರಿಸುವಂತೆ ನಿರ್ದೇಶಿಸಲು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಕೋವಿಡ್-19 ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಯೋಜನೆಯನ್ನು ವಿಸ್ತರಿಸುವಂತೆ ನಗರದ "ಡಾ. ರಾಮ ಮನೋಹರ್ ಲೋಹಿಯ ಚಿಂತಕರ ವೇದಿಕೆ" ಅಧ್ಯಕ್ಷ ಬಿ.ಎಸ್. ಶಿವಣ್ಣ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠವು ಕೇಂದ್ರ ಸರ್ಕಾರ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದೆ.
ಇದೇ ವೇಳೆ 2020ರ ಮಾರ್ಚ್‍ವರೆಗೆ ಬಾಕಿ ಇರುವ ಎಲ್ಲಾ ಶೈಕ್ಷಣಿಕ ಸಾಲಗಳನ್ನು ಮನ್ನಾ ಮಾಡಬೇಕು ಅಥವಾ ಪರ್ಯಾಯ ಪರಿಹಾರವಾಗಿ ಸಾಲದ ಮೇಲಿನ ಬಡ್ಡಿ ಪಾವತಿಯನ್ನು 2020ರ ಮಾರ್ಚ್ ನಿಂದ ಮುಂದಿನ ಎರಡು ವರ್ಷದ ಅವಧಿಗೆ ಮುಂದೂಡಬೇಕು ಎಂಬ ಅರ್ಜಿದಾರರ ಮನವಿಯನ್ನು ಒಪ್ಪಲು ಹೈಕೋರ್ಟ್ ನಿರಾಕರಿಸಿದೆ.
ಅರ್ಜಿದಾರರ ಕೋರಿಕೆ: ಕೇಂದ್ರದ ಸಿಎಸ್‍ಐಎಸ್ ಯೋಜನೆಯಡಿ ವಾರ್ಷಿಕ 4.5 ಲಕ್ಷ ಆದಾಯವಿರುವ ಪೋಷಕರ ಮಕ್ಕಳಿಗೆ ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸಿಗುತ್ತದೆ. ಆದರೆ, ಸದ್ಯದ ಕೋವಿಡ್-19 ಪರಿಸ್ಥಿತಿಯಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶೈಕ್ಷಣಿಕ ಸಾಲ ಮರುಪಾವತಿ ಕಷ್ಟವಾಗಿದೆ. ಆದ್ದರಿಂದ ಸಿಎಸ್‍ಐಎಸ್ ಯೋಜನೆಯ ಸೌಲಭ್ಯಗಳನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.