ಬೆಂಗಳೂರು:ನೂತನ ಜಿಲ್ಲೆ ವಿಜಯನಗರದಿಂದ ಕಂಪ್ಲಿ ತಾಲೂಕನ್ನು ಕೈಬಿಟ್ಟಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಈ ಕುರಿತು ಕಂಪ್ಲಿ ವಕೀಲರ ಸಂಘಧ ಕಾರ್ಯಾಧ್ಯಕ್ಷ ಕೆ.ಪ್ರಭಾಕರ್ ರಾವ್ ಹಾಗೂ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಗಳು ಹೈಕೋರ್ಟ್ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿವೆ. ಅರ್ಜಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರು, ಭೂ ಮಾಪನ ಇಲಾಖೆಯನ್ನು ಪ್ರತಿವಾದಿಗಳಾಗಿ ನಮೂದಿಸಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿದಾರರ ಕೋರಿಕೆ:ಬಳ್ಳಾರಿಯನ್ನು ವಿಭಜಿಸಿ, ವಿಜಯನಗರ ಜಿಲ್ಲೆ ರಚಿಸುವ ವೇಳೆ ಕಂಪ್ಲಿ ತಾಲೂಕನ್ನು ಕೂಡ ಸೇರಿಸಬೇಕು ಎಂದು ಒತ್ತಾಯಿಸಲಾಗಿತ್ತು. ಜಿಲ್ಲೆ ಆರಂಭದಲ್ಲಿ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಿದ್ದ ಸಂದರ್ಭದಲ್ಲಿಯೂ ಸಾವಿರಾರು ಜನರು ಕಂಪ್ಲಿಯನ್ನು ಹೊಸ ಜಿಲ್ಲೆಯಲ್ಲಿ ಸೇರಿಸುವಂತೆ ಕೋರಿದ್ದರು. ಆದರೆ, ಸರ್ಕಾರ 2021ರ ಫೆ. 8ರಂದು ಅಧಿಸೂಚನೆ ಹೊರಡಿಸುವ ವೇಳೆ ಕಂಪ್ಲಿಯನ್ನು ನೂತನ ಜಿಲ್ಲೆಯಿಂದ ಕೈಬಿಟ್ಟಿದೆ.
ಸರ್ಕಾರದ ಈ ಕ್ರಮ ಕಾನೂನು ಬಾಹಿರ. ಭೂ ಕಂದಾಯ ಕಾಯ್ದೆಯ ಸೆಕ್ಷನ್ 6ರ ಪ್ರಕಾರ ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಗಣಿಸದೆ, ವಿಚಾರಣೆಯನ್ನೂ ಮಾಡದೆ ರಾಜಕೀಯ ಹಿತಾಸಕ್ತಿಗೆ ಪೂರಕವಾಗಿ ಜಿಲ್ಲೆ ರಚಿಸಿರುವುದು ಸರಿಯಲ್ಲ. ಆದ್ದರಿಂದ ಕಂಪ್ಲಿಯನ್ನು ಹೊಸ ಜಿಲ್ಲೆ ವಿಜಯನಗರಕ್ಕೆ ಸೇರಿಸಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೆ ಜಿಲ್ಲೆ ರಚನೆ ಸಂಬಂಧ ಮುಂದಿನ ಯಾವುದೇ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಓದಿ:ರಮೇಶ್ ಜಾರಕಿಹೊಳಿ ಸಿಡಿ ಜೊತೆ ಯಡಿಯೂರಪ್ಪ ಸಿಡಿಯ ಬಗ್ಗೆಯೂ ಚರ್ಚೆಯಾಗಲಿ: ವಾಟಾಳ್