ಬೆಂಗಳೂರು: ಸ್ನೇಹಿತೆಯ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಕೆಆರ್ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ದೀಪಕ್ ಕುಮಾರ್ ಸೇರ್‌ಕರ್ ಬಂಧಿತ ಆರೋಪಿ. ಈತ ಇತ್ತೀಚಿಗೆ ಸ್ನೇಹಿತೆಯೊಂದಿಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ. ಕಾರ್ಯಕ್ರಮ ಮುಗಿದ ಬಳಿಕ ಯುವತಿ ದೀಪಕ್ ರೂಂನಲ್ಲಿಯೇ ಉಳಿದಿದ್ದಳು. ಮರುದಿನ ಯುವತಿ ಸ್ನಾನ ಮಾಡುವ ವಿಡಿಯೋವನ್ನ ಆರೋಪಿ ರಹಸ್ಯವಾಗಿಯೇ ಚಿತ್ರೀಕರಿಸಿದ್ದ.
ಘಟನೆಯ ಬಳಿಕ ಆರೋಪಿ ರೂಂ ಖಾಲಿ ಮಾಡಿ ತನ್ನ ಊರಿಗೆ ತೆರಳಿದ್ದ. ಅಲ್ಲಿಂದ ಹೊಸ ಇ-ಮೇಲ್ ಐಡಿ ಕ್ರಿಯೇಟ್ ಮಾಡಿ ಯುವತಿಗೆ ವಿಡಿಯೋ ಕಳುಹಿಸಿ, 10 ದಿನಗಳ ಒಳಗೆ 3 ಲಕ್ಷ ರೂಪಾಯಿ ಕೊಡದಿದ್ರೇ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಿಯ ಬಿಡುತ್ತೇನೆಂದು ಬೆದರಿಕೆ ಹಾಕಿದ್ದ.
ವಿಡಿಯೋ ನೋಡಿದ ಸ್ನೇಹಿತೆಗೆ, ಸ್ನಾನ ಮಾಡಿರುವ ಸ್ಥಳವು ದೀಪಕ್ ಮನೆಯ ದೃಶ್ಯ ಎಂದು ಖಚಿತವಾಗಿತ್ತು. ನಂತರ ಯುವತಿ ತನ್ನ ವಿರುದ್ಧ ಪೊಲೀಸರಿಗೆ ದೂರು ನೀಡುತ್ತಾಳೆ ಎಂದು ತಿಳಿದು ಮೆಸೇಜ್ ಹಾಗೂ ವಿಡಿಯೋ ಡಿಲೀಟ್ ಮಾಡಿ ತಲೆಮರೆಸಿಕೊಂಡಿದ್ದ.
ಆರೋಪಿ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ದೀಪಕ್ ಉಪಯೋಗಿಸುತ್ತಿದ್ದ ಮೋಬೈಲ್ ಟವರ್ ಲೋಕೇಷನ್ ಆಧರಿಸಿ ಆತ ಸ್ವಗ್ರಾಮದಲ್ಲಿ ಇರುವುದಾಗಿ ಪತ್ತೆ ಮಾಡಿದ್ದರು. ಅಲ್ಲಿಗೆ ತೆರಳಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ನ ವಶಪಡಿಸಿಕೊಂಡಿದ್ದಾರೆ.