ಬೆಂಗಳೂರು: ಎಂಟಿಬಿ ನಾಗರಾಜ್, ಹೆಚ್ ವಿಶ್ವನಾಥ್ ಹಾಗೂ ಆರ್ ಶಂಕರ್ ಅವರಿಗೆ ಸಚಿವ ಸ್ಥಾನ ನೀಡದಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮನವಿ ಮಾಡಿದೆ.
ಮೂವರು ನೂತನ ಎಂಎಲ್ಸಿಗಳಿಗೆ ಸಚಿವ ಸ್ಥಾನ ನೀಡಬಾರದು ಎಂದು ಕೋರಿ ವಕೀಲ ಎ.ಎಸ್. ಹರೀಶ್ ಕುಮಾರ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿ, ಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್, ಆರ್. ಶಂಕರ್ ಅವರು ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ವಿಶ್ವನಾಥ್ ಅವರು ಪರಿಷತ್ಗೆ ನಾಮ ನಿರ್ದೇಶನಗೊಂಡಿದ್ದಾರೆ.
ಸುಪ್ರೀಂಕೋರ್ಟ್ನ ಆದೇಶದಂತೆ ಈ ಮೂವರು ಜನರಿಂದ ಆಯ್ಕೆಯಾಗಿಲ್ಲ. ಬದಲಿಗೆ ಚುನಾಯಿತ ಶಾಸಕರಿಂದ ಆಯ್ಕೆಯಾಗಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಹೀಗಾಗಿ ಇವರನ್ನು ಸಚಿವರನ್ನಾಗಿಸದಂತೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಸರ್ಕಾರದ ಪರ ವಾದ ಮಂಡಿಸಿದ ವಕೀಲ ಪ್ರಭುಲಿಂಗ ಕೆ. ನಾವಡಗಿ ಅವರು, ಪ್ರಕರಣದಲ್ಲಿ ಅರ್ಜಿದಾರರು ಎತ್ತಿರುವ ವಾದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆಕ್ಷೇಪಣೆಗಳಿವೆ. ಅವುಗಳನ್ನು ವಿಡಿಯೋ ಕಾನ್ಫರೆನ್ಸ್ ಬದಲಿಗೆ ನೇರವಾಗಿ ಹಾಜರಾಗಿ ಮಂಡಿಸುವುದು ಸೂಕ್ತವೆನ್ನಿಸಿದೆ.
ಹೀಗಾಗಿ, ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠ, ಪ್ರತಿವಾದಿಗಳಾದ ಎಂಟಿಬಿ, ಶಂಕರ್ ಹಾಗೂ ವಿಶ್ವನಾಥ್ ಪರ ವಕೀಲರು ಕೂಡ ನೇರವಾಗಿ ಬಂದು ವಾದ ಮಂಡಿಸಬಹುದು ಎಂದು ಸೂಚಿಸಿ, ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಿತು.