ಬೆಂಗಳೂರು :ವಾಕ್ ಸ್ವಾತಂತ್ರ್ಯ ನಿರ್ಬಂಧಿಸುವ ನ್ಯಾಯಾಂಗ ನಿಂದನೆ ಕಾಯ್ದೆ-1971ರ ಸೆಕ್ಷನ್ 2(ಸಿ) (1) ಅನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಾರ್ಚ್ 30ರವರೆಗೆ ಕಾಲಾವಕಾಶ ನೀಡಿದೆ.
ಈ ಕುರಿತು ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್, ಎನ್ ರಾಮ್, ಅರುಣ್ ಶೌರಿ ಹಾಗೂ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ಪೀಠ ಮಾ.30ರೊಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ : ಮೌಖಿಕ ಅಥವಾ ಲಿಖಿತ ಪ್ರಕಟಣೆ ಸೇರಿ ಯಾವುದೇ ರೀತಿಯಲ್ಲಿ ನ್ಯಾಯಾಲಯದ ಘನತೆಗೆ ಧಕ್ಕೆ ತರುವಂತಹ ದೂಷಣೆಗಳನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆ ಎಂದು ನ್ಯಾಯಾಂಗ ನಿಂದನೆ ಕಾಯ್ದೆ-1971ರ ಸೆಕ್ಷನ್ 2 (ಸಿ) (1) ವ್ಯಾಖ್ಯಾನಿಸುತ್ತದೆ. ಆದರೆ, ಇದು ಸಂವಿಧಾನದ ಪರಿಚ್ಛೇದ 19(1)ರಲ್ಲಿ ಖಾತರಿಪಡಿಸಿದ ಮುಕ್ತ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ.
ಇನ್ನು, ನ್ಯಾಯಾಲಯದ ದೂಷಣೆ ಎನ್ನುವುದು ವಸಾಹತುಶಾಹಿಗಳಿಂದ ಬಂದಿರುವ ಸಂಗತಿ. ಇದಕ್ಕೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದಲ್ಲಿ ಯಾವುದೇ ಸ್ಥಾನವಿಲ್ಲ. ಆದ್ದರಿಂದ, ನ್ಯಾಯಾಂಗ ನಿಂದನೆ ಕಾಯ್ದೆ-1971ರ ಸೆಕ್ಷನ್ 2 (ಸಿ) (1)ನ್ನು ಸಂವಿಧಾನದ ಉಲ್ಲಂಘನೆ ಎಂದು ಘೋಷಿಸಬೇಕು.
ಹಾಗೆಯೇ, ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಸೂಕ್ತ ನಿಯಮ ಮತ್ತು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.