ಬೆಂಗಳೂರು :ರಾಜಧಾನಿ ಬೆಂಗಳೂರಿನಲ್ಲಿ ಜನರು ಸಾರ್ವಜನಿಕ ಸಾರಿಗೆ ಬಳಕೆಯಿಂದ ದೂರವಾಗಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರಾ?. ಹೀಗೊಂದು ಪ್ರಶ್ನೆ ಮೂಡಲು ಕಾರಣ ಬೆಂಗಳೂರಿನಲ್ಲಿ 1 ಕೋಟಿ ಸನಿಹಕ್ಕೆ ವಾಹನಗಳ ಸಂಖ್ಯೆ ಬಂದು ನಿಂತಿದೆ. ಹೀಗಾಗಿ, ಸಾರ್ವಜನಿಕ ಸಾರಿಗೆ ಸೇವೆ ಹಳ್ಳ ಹಿಡಿಯುತ್ತಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ.
ಇನ್ನು ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸಿ ಎಂದು ಎಷ್ಟೇ ಪ್ರಚಾರ ಮಾಡಿದರೂ ಉಪಯೋಗಕ್ಕೆ ಬರ್ತಿಲ್ಲ. ಉಳ್ಳವರು 2-3 ವಾಹನಗಳನ್ನು ಹೊಂದಿದ್ದಾರೆ. ಹೀಗಾಗಿ, ಹೆಚ್ಚಾಗ್ತಿರೋ ವಾಹನಗಳ ಸಂಖ್ಯೆ ಭವಿಷ್ಯದಲ್ಲಿ ಉಸಿರಾಡುವ ಗಾಳಿ ವಿಷಕಾರಿಯಾಗುವ ಆತಂಕ ಇದೆ.
ಬೆಂಗಳೂರು ಕೂಲ್ ಸಿಟಿಯಿಂದ ಟ್ರಾಫಿಕ್ ಸಿಟಿ, ಪೊಲ್ಯೂಷನ್ ಸಿಟಿ ಆಗುವ ಲಕ್ಷಣವಿದೆ. ವಾಹನ ದಟ್ಟನೆ ತಗ್ಗಿಸಲು ನಮ್ಮ ಮೆಟ್ರೋ ಸಂಚಾರವನ್ನು ಆರಂಭಿಸಿದ್ರೂ ನಗರದಲ್ಲಿ ಪ್ರತಿ ವರ್ಷ ಲಕ್ಷ ಲಕ್ಷ ವಾಹನಗಳು ನೋಂದಣಿಯಾಗ್ತಿರೋದು ಅಚ್ಚರಿ ಮೂಡಿಸಿದೆ.
ಬೆಂಗಳೂರಿನಲ್ಲಿ 1.30 ಕೋಟಿ ಜನಕ್ಕೆ, 1 ಕೋಟಿ ವಾಹನ ಪ್ರತಿ ವರ್ಷ 5 ಲಕ್ಷ ಹೊಸ ವಾಹನ ನೋಂದಣಿ :ಬೆಂಗಳೂರಿನ ಜನಸಂಖ್ಯೆ ಸುಮಾರು 1 ಕೋಟಿ 30 ಲಕ್ಷ ಇದೆ. ಅದೇ ರೀತಿ ವಾಹನಗಳ ಸಂಖ್ಯೆ 1 ಕೋಟಿ ಸನಿಹಕ್ಕೆ ಬಂದಿದೆ. ವಾಹನ ಸಂಚಾರ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋವನ್ನು ಆರಂಭಿಸಲಾಗಿದೆ. ದಿನಕ್ಕೆ 4 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರ ಹೊರತಾಗಿಯೂ ಖಾಸಗಿ ವಾಹನ ಬಳಕೆಯ ಸಂಖ್ಯೆ ಹೆಚ್ಚುತ್ತಿರುವುದು ಗಂಭೀರ ವಿಷಯ.
ಬೆಂಗಳೂರಿನಲ್ಲಿ 98 ಲಕ್ಷ 38 ಸಾವಿರದ 156 ವಾಹನಗಳು ಸಾರಿಗೆ ಇಲಾಖೆಯಲ್ಲಿ ಈವರೆಗೆ ನೋಂದಣಿ ಆಗಿವೆ. 2020 ಮಾರ್ಚ್ನಲ್ಲಿ 94 ಲಕ್ಷ 71 ಸಾವಿರದ 72 ವಾಹನಗಳು ಇದ್ದವು. ಆದರೆ, ಅದು ಮಾರ್ಚ್ 2021ನಲ್ಲಿ 98 ಲಕ್ಷ 38 ಸಾವಿರದ 156 ಏರಿಕೆ ಕಂಡಿದೆ. ನಗರದಲ್ಲಿ ಪ್ರತಿ ವರ್ಷ 5 ಲಕ್ಷಕ್ಕೂ ಹೊಸ ವಾಹನಗಳು ಸೇರ್ಪಡೆ ಆಗುತ್ತಿವೆ.
ಸಾರಿಗೆ ಇಲಾಖೆಯಲ್ಲಿ ವಾಹನಗಳ ನೋಂದಣಿ ವಿವರ 87 ಲಕ್ಷ ಸಾರಿಗೆಯೇತರ ವಾಹನ :ಮನೆಯಲ್ಲಿ ಕೇವಲ ಇಬ್ಬರೇ ಇದ್ದರೂ ನಾಲ್ಕೈದು ವಾಹನಗಳಿರುತ್ತವೆ. ಡೀಸೆಲ್ ವಾಹನಗಳ ನೋಂದಣಿಯನ್ನು ತಗ್ಗಿಸಬೇಕಿದೆ. ನಗರದಲ್ಲಿ ದ್ವಿಚಕ್ರ, ಕಾರುಗಳು, ಓಮ್ನಿ ಬಸ್ ಸೇರಿ ಸಾರಿಗೇಯೇತರ ವಾಹನ ಸಂಖ್ಯೆಯೇ 86 ಲಕ್ಷ 98 ಸಾವಿರದಷ್ಟಿವೆ. ಟ್ರಕ್ಸ್ ಮತ್ತು ಲಾರಿಗಳು 1 ಲಕ್ಷ 84 ಸಾವಿರ ಇವೆ. ಬಸ್ಗಳು 1 ಲಕ್ಷ 15 ಸಾವಿರ ಇದ್ರೆ, ಟ್ಯಾಕ್ಸಿಗಳು 2 ಲಕ್ಷ 50 ಸಾವಿರ ಸೇರಿ ನಗರದಲ್ಲಿ 98 ಲಕ್ಷ 38 ಸಾವಿರದ 156 ವಾಹನಗಳು ನೋಂದಣಿ ಆಗಿರುವುದು ಸಾರಿಗೆ ಇಲಾಖೆ ಅಂಕಿ-ಅಂಶಗಳು ಸಾರುತ್ತವೆ.
ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಬೇಕಾಗಿದ್ದರೆ ಕಾರ್ಪೂಲಿಂಗ್ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಇದರಿಂದ ಹೆಚ್ಚು ವಾಹನಗಳು ರಸ್ತೆಗೆ ಬರುವುದನ್ನು ತಡೆಯಬಹುದಾಗಿದೆ. ಕಾರು ಕೊಳ್ಳಬೇಕಾದರೆ ಮನೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಬೇಕು. ಇಲ್ಲವಾದಲ್ಲಿ ನೋಂದಣಿಗೆ ಅವಕಾಶವಿಲ್ಲ ಎಂಬ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕಿದೆ.
ಓದಿ:₹377 ಕೋಟಿ ಬಿಬಿಎಂಪಿ ಬಜೆಟ್ ವೆಚ್ಚ ಹೆಚ್ಚಳ: ಆಸ್ತಿ ತೆರಿಗೆ ಮೇಲೆ ಅಧಿಕಾರಿಗಳ ಕಣ್ಣು