ಬೆಂಗಳೂರು:ಈಜುಕೊಳ, ಕಬ್ಬಡಿ, ಕುಸ್ತಿ, ಜಿಮ್ ಹೊರತುಪಡಿಸಿ ಉಳಿದ ಕ್ರೀಡಾ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಪ್ರವಾಸೋದ್ಯಮ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ಅವರು ಈ ಕುರಿತು ಮಾಹಿತಿ ನೀಡಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವಕಾಶವಿರುವ ಖೋಖೋ, ಬಾಸ್ಕೆಟ್ಬಾಲ್, ಹಾಕಿ ಮತ್ತಿತರ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಕಬ್ಬಡ್ಡಿ, ಈಜುಕೊಳ, ಕುಸ್ತಿಗೆ ಅವಕಾಶವಿರುವುದಿಲ್ಲ. ಉಳಿದಂತೆ ಎಲ್ಲ ಕ್ರೀಡೆಗಳಿಗೆ ಅವಕಾಶ ನೀಡಲು ಸರ್ಕಾರ ಸಮ್ಮತಿಸಿದೆ ಎಂದು ತಿಳಿಸಿದರು.
ಕ್ರೀಡಾ ಚಟುವಟಿಕೆ ನಡೆಯುವ ಸ್ಥಳಗಳಲ್ಲಿ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಕ್ರೀಡೆ ಆಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸೋಂಕು ಹರಡುವಿಕೆ ತಡೆಗಟ್ಟಲು ಸ್ಕ್ಯಾನಿಂಗ್ ವ್ಯವಸ್ಥೆ, ಪ್ರತ್ಯೇಕ ಪರಿಕರಗಳ ಬಳಕೆ ಅಗತ್ಯ. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.
ಕ್ರೀಡಾ ಕ್ಲಬ್ಗಳಲ್ಲಿ ತರಬೇತಿಗೆ ಅವಕಾಶವಿದೆ. ಕ್ಲಬ್ ಸದಸ್ಯರಿಗೆ ಮಾತ್ರ ಅವಕಾಶವಿದೆ. ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ರೆಸ್ಟೋರೆಂಟ್ ರಿಕ್ರಿಯೇಷನ್ಗಳಿಗೆ ಅವಕಾಶವಿಲ್ಲ ಎಂದು ಸಚಿವರು ತಿಳಿಸಿದರು.
ಫಿಟ್ನೆಸ್ ಸೆಂಟರ್ಗಳಲ್ಲಿ ವೃತ್ತಿಪರರಿಗೆ ಅವಕಾಶ ಕೊಡಬೇಕು ಎಂಬ ಮನವಿ ಬಂದಿತ್ತು. ಆದರೆ, ಜೂನ್ 1ರವರೆಗೆ ಬೇಡ ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ಐಪಿಎಲ್ನಲ್ಲಿ ಆಟಗಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದರು.