ಕೆ.ಆರ್. ಪುರ: ರಾತ್ರಿ ಸಮಯದಲ್ಲಿ ಅಕ್ರಮವಾಗಿ ರಸ್ತೆ ಬದಿಯಲ್ಲಿ ಅನುಪಯುಕ್ತ ವಸ್ತುಗಳು ಸೇರಿದಂತೆ ಕಸ ಹಾಗೂ ಮಾಂಸ, ರಾಸಾಯನಿಕ ತ್ಯಾಜ್ಯ ಸುರಿಯುತ್ತಿದ್ದು, ಗ್ರಾಮೀಣ ಪ್ರದೇಶಗಳು ಮಾಲಿನ್ಯಕ್ಕೆ ತುತ್ತಾಗಿ, ರೋಗಗಳ ಅವಾಸಸ್ಥಾನವಾಗುವ ಭೀತಿ ನಿರ್ಮಾಣವಾಗಿದೆ.
ಆವಲಹಳ್ಳಿ ಕೆರೆ ಮತ್ತು ರಾಂಪುರ ಕೆರೆಯ ರಸ್ತೆಯ ಇಕ್ಕೆಲಗಳಲ್ಲಿ ನಿತ್ಯ ರಾಶಿಗಟ್ಟಲೇ ತ್ಯಾಜ್ಯ ವಿಲೇವಾರಿಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಬೇಜವಾಬ್ದಾರಿ ಇದಕ್ಕೆ ಕುಮ್ಮಕ್ಕು ನೀಡಿದಂತಾಗಿದೆ.
ಕೆರೆಯ ಬೇಲಿಗಳ ಪಕ್ಕ ರಾತ್ರಿ ವೇಳೆ ಮಾಂಸ ತ್ಯಾಜ್ಯ, ಸತ್ತ ಕೋಳಿಗಳನ್ನು ಹಾಗೂ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿಯುವುದು ಸಾಮಾನ್ಯ ಸಂಗತಿಯಾಗಿದ್ದು, ಇವುಗಳ ದುರ್ನಾತದಿಂದ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ.
ಮಾಂಸದ ತ್ಯಾಜ್ಯವನ್ನು ತಿನ್ನಲು ನಾಯಿ, ಕಾಗೆ, ಹದ್ದುಗಳ ಹಿಂಡು ಗುಂಪುಗೂಡಿಕೊಂಡು ರಸ್ತೆಯೆಲ್ಲಾ ಓಡಾಡಿ ವಾಹನ ಸವಾರರಿಗೆ ಅಡ್ಡಿಯುಂಟು ಮಾಡುತ್ತಿವೆ. ಕಸವನ್ನು ಸುರಿದು ಬೆಂಕಿ ಇಡುವುದರಿಂದ ಕೆಟ್ಟ ವಾಸನೆ ಹರಡುತ್ತಿದ್ದು, ದಟ್ಟ ಹೊಗೆಯಿಂದ ಸುತ್ತಮುತ್ತಲಿನ ಗ್ರಾಮಗಳ ಪರಿಸರ ಮಲಿನವಾಗುತ್ತಿದೆ.
ಗ್ರಾಮಸ್ಥರು ನಾನಾ ರೀತಿಯ ಸಾಂಕ್ರಾಮಿಕ ರೋಗಗಳಿಗೆ, ತುತ್ತಾಗಿ ಆಸ್ಪತ್ರೆಗೆ ಅಲೆಯುವಂತಾಗಿದೆ. ಸೊಳ್ಳೆ ಹಾಗೂ ನೊಣಗಳ ಹಾವಳಿ ವಿಪರೀತವಾಗಿ ಜನರು ನಾನಾ ರೀತಿಯ ಸಂಕಷ್ಟ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಸ ಮತ್ತು ತ್ಯಾಜ್ಯ ಸುರಿಯುವವರ ಮೇಲೆ ಕಾನೂನು ಕ್ರಮ ಕೈಗೊಂಡು ಪರಿಸರ ಸಂರಕ್ಷಿಸಬೇಕೆಂಬುದು ಸ್ಥಳೀಯ ಗ್ರಾಮಗಳ ನಿವಾಸಿಗಳ ಆಗ್ರಹವಾಗಿದೆ.